ಬೆಂಗಳೂರು:ರಾಯಚೂರು ಜಿಲ್ಲೆ ಲಿಂಗಸೂಗೂರು ಹಾಗೂ ದೇವದುರ್ಗ ತಾಲೂಕುಗಳಲ್ಲಿ ನಾರಾಯಣಪುರ ಬಲದಂಡೆ ನಾಲೆಯ 1 ರಿಂದ 15 ವಿತರಣಾ ನಾಲೆಗಳ ಆಧುನೀಕರಣದಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸಂಜೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಲ್ಲಿ ಇಂಜಿನಿಯರ್ಗಳು, ಕಾಂಟ್ರ್ಯಾಕ್ಟರ್ಗಳು ಹಾಗೂ ಸರ್ಕಾರ ಎಲ್ಲರೂ ಸೇರಿ ಗೋಲ್ಮಾಲ್ ಮಾಡಿದ್ದಾರೆ. ಹಿಂದೊಮ್ಮೆ ಆಧುನೀಕರಣಗೊಂಡ ಕಾಲುವೆಗಳಿಗೆ ಮತ್ತೆ ಮರು ನಿರ್ಮಾಣ ಮಾಡುವುದಾಗಿ ಹೇಳಿ ದುಡ್ಡು ಹೊಡೆಯಲಾಗಿದೆ. ಮಣ್ಣು ತುಂಬಿಸಿದ್ದೇವೆ, ಕಲ್ಲು ಬಂಡೆ ಬ್ಲಾಸ್ಟ್ ಮಾಡಿದ್ದೇವೆ, ಮುರಮ್ ಹಾಕಿದ್ದೇವೆ ಎಂದೆಲ್ಲ ಸುಳ್ಳು ಲೆಕ್ಕ ನೀಡಿ ಬಿಲ್ ಪಡೆಯಲಾಗಿದೆ ಎಂದು ದೂರಿದರು.
ರಾಯಚೂರು ಜಿಲ್ಲೆ ಲಿಂಗಸೂಗೂರು ಹಾಗೂ ದೇವದುರ್ಗ ತಾಲೂಕುಗಳಲ್ಲಿ ನಾರಾಯಣಪುರ ಬಲದಂಡೆ ನಾಲೆಯ 1 ರಿಂದ 15 ವಿತರಣಾ ನಾಲೆಗಳ ಆಧುನೀಕರಣ ಮಾಡಲು 828 ಕೋಟಿ ರೂಪಾಯಿ ಮೊತ್ತದ ಹಾಗೂ 16 ರಿಂದ 18 ಉಪಕಾಲುವೆಗಳ ಅಂದಾಜು ವೆಚ್ಚ 791 ಕೋಟಿ ರೂಪಾಯಿಯ ಒಟ್ಟು 1,619 ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದೆ. ಈ ಎರಡೂ ಟೆಂಡರ್ ಎನ್.ಡಿ ವಡ್ಡರ್ ಅವರ ಹೆಸರಿಗಾಗಿದೆ. ಇವರು ಲಿಂಗಸೂಗೂರಿನ ಮಾಜಿ ಶಾಸಕರಾದ ಮಾನಪ್ಪ ವಜ್ಜಲ್ ಅವರ ಸಹೋದರ. ಕೆಲಸವೇ ಆಗದೆ 425 ಕೋಟಿ ರೂಪಾಯಿ ಬಿಲ್ ಪಾವತಿಯಾಗಿದೆ ಎಂದು ಆರೋಪಿಸಿದರು.