ಬೆಂಗಳೂರು : ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ನಮ್ಮ ವಿದ್ಯಾರ್ಥಿಗಳ ಮೇಲೆ ಹಿಂದಿ ಭಾಷೆ ಹೇರುವ ಹುನ್ನಾರವನ್ನು ರಾಜ್ಯ ಸರ್ಕಾರ ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ನಾನು ಇದನ್ನು ಪ್ರಾರಂಭದಲ್ಲಿಯೇ ವಿರೋಧಿಸಿದ್ದೇನೆ. ದಕ್ಷಿಣದ ಉಳಿದ ರಾಜ್ಯಗಳು ಈ ಹೇರಿಕೆಗೆ ಪ್ರತಿರೋಧವನ್ನು ದಾಖಲಿಸಿವೆ ಎಂದು ಹೇಳಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಸುಪ್ರೀಂಕೋರ್ಟ್ ತೀರ್ಪಿನಿಂದ ಅನ್ಯಾಯಕ್ಕೀಡಾಗಿರುವ ಪ್ರಾದೇಶಿಕ ಭಾಷೆಗಳ ರಕ್ಷಣೆಗಳ ಬಗ್ಗೆ ಚರ್ಚಿಸಲು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಪ್ರಧಾನಮಂತ್ರಿಯವರಿಗೆ ಪತ್ರ ಬರೆದಿದ್ದೆ. ಆದರೆ, ಅವರಿಂದ ಈವರೆಗೂ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾಷಾ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ. ಅದು ಮಕ್ಕಳ ಹೆತ್ತವರ ಆಯ್ಕೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿರುವ ಪರಿಶೀಲನಾ ಅರ್ಜಿ ಮತ್ತು ಮೇಲ್ಮನವಿಗಳೆರಡನ್ನೂ ಸುಪ್ರೀಂಕೋರ್ಟ್ ತಿರಸ್ಕರಿಸಿರುವುದು ನಮಗೆ ಹಿನ್ನಡೆಯಾಗಿದೆ ಎಂದರು.
ನಮ್ಮ ಬಹಳಷ್ಟು ತಂದೆತಾಯಿಗಳಿಗೆ ತಮ್ಮ ಮಕ್ಕಳಿಂದ ಅಪ್ಪ-ಅಮ್ಮ ಎನ್ನುವುದಕ್ಕಿಂತ ಮಮ್ಮಿ-ಡ್ಯಾಡಿ ಎಂದು ಕರೆಸಿಕೊಳ್ಳುವ ಆಸೆ. ನಾನು ನನ್ನ ಮಕ್ಕಳಿಗೆ ಅಪ್ಪ-ಅಮ್ಮ ಎಂದು ಕರೆಯ ಬೇಕೆಂದು ಹೇಳಿಕೊಟ್ಟಿದ್ದೆ. ಈ ಬದ್ಧತೆ ನಮ್ಮೆಲ್ಲರಲ್ಲಿಯೂ ಇರಬೇಕು.
ಯಾವುದೇ ಭಾಷೆಯನ್ನ ಕಲಿಯಿರಿ. ಆದರೆ, ಮಾತೃ ಭಾಷೆಯನ್ನು ಮಾತ್ರ ಮರೆಯಬೇಡಿ. ಕನ್ನಡದಲ್ಲಿ ವ್ಯಾಸಂಗ ಮಾಡಿಸಿದ ವಿದ್ಯಾರ್ಥಿಗಳ ಪಾಲಕರಿಗೆ ಮತ್ತು ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಿದ್ದರಾಮಯ್ಯ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.