ಬೆಂಗಳೂರು: ಅಂತಾರಾಜ್ಯ ಜಲವಿವಾದ ಸಂಬಂಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಸದನದ ನಾಯಕರು ಸರ್ಕಾರಕ್ಕೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಮ್ಮ ಒತ್ತಾಯದಿಂದ ಇಂದು ಸರ್ವ ಪಕ್ಷ ಸಭೆ ಕರೆದಿದ್ದಾರೆ. ಮೇಕೆದಾಟು, ಕೃಷ್ಣ ಮೇಲ್ದಂಡೆ, ನದಿ ಜೋಡಣೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಮೇಕೆದಾಟು ವಿಚಾರದಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡಿದೆ. ನಾರ್ಮಲ್ ಇಯರ್ನಲ್ಲಿ ನೀರು ಹಂಚಿಕೆ ಬೇಡ. ಸಂಕಷ್ಟದ ದಿನಗಳಲ್ಲಿ ನೀರು ಹಂಚಿಕೆಯಾಗಬೇಕು. ತಮಿಳುನಾಡಿಗೆ ಇದರಲ್ಲಿ ಯಾವುದೇ ಹಕ್ಕಿಲ್ಲ. ಮೇಕೆದಾಟು ವಿಚಾರದಲ್ಲಿ ಪರಿಸರ ಇಲಾಖೆ ಅನುಮತಿ ಬೇಕಾಗಿದೆ. ಜೊತೆಗೆ ಕಾವೇರಿ ಅಥಾರಿಟಿ ಪರ್ಮಿಷನ್ ಬೇಕಾಗಿದೆ ಅಷ್ಟೇ. ಈಗಾಗಲೇ ಐದು ಸಭೆ ಕರೆಯಲಾಗಿದೆ. ಆದರೆ, ಇದರ ಬಗ್ಗೆ ಅವರು ಚರ್ಚೆನೇ ಮಾಡಿಲ್ಲ ಎಂದರು.
ಸ್ಪಷ್ಟವಾಗಿ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಮಾಡಿಕೊಳ್ಳಿ ಅಂತ ಹೇಳಿದ್ದೇವೆ. ಒಂದು ನಿಯೋಗ ಹೋಗಬೇಕು ಅಂತ ಹೇಳಿದ್ದೇವೆ. ನಮ್ಮ ನೀರನ್ನ ಬಳಸಿಕೊಳ್ಳೋಕೆ ಯಾವ ದೊಣ್ಣೆ ನಾಯಕನ ಪರ್ಮಿಷನ್ ಬೇಕು. ನದಿ ಜೋಡಣೆ ವಿಚಾರವಾಗಿ ನಮ್ಮನ್ನು ಕೇಳಲೇ ಇಲ್ಲ. ಅದು ಹೇಗೆ ನಮಗೆ ಉಪಯೋಗ ಆಗುತ್ತೆ ಎಂದು ಸ್ಪಷ್ಟ ಮಾಹಿತಿ ನೀಡಿಲ್ಲ ಎಂದರು.
ಸಭೆಯಲ್ಲಿ ಡಿಕೆಶಿ ಹೇಳಿದ್ದೇನು?:ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ. ತಮಿಳುನಾಡು ಪರ ವಕೀಲರೇ 2018 ರಲ್ಲಿ ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸುವಾಗ ಮೆಟ್ಟೂರಿನ ಮೇಲ್ಭಾಗದಲ್ಲಿ ಕರ್ನಾಟಕವು ಮತ್ತೊಂದು ಅಣೆಕಟ್ಟೆ ಕಟ್ಟುವ ಬಗ್ಗೆ ಪರಿಗಣಿಸಬೇಕು ಎಂದು ಡಿಕೆಶಿ ತಿಳಿಸಿದ್ದಾರೆ.
ಮೇಕೆದಾಟು ಯೋಜನೆ ಕರ್ನಾಟಕದ ಭೌಗೋಳಿಕ ಪರಿಧಿಯಲ್ಲಿ ಬರುತ್ತದೆ. ಕರ್ನಾಟಕವು ಇದಕ್ಕಾಗಿ ನೆರೆರಾಜ್ಯಗಳ ಅನುಮತಿ ಪಡೆಯಬೇಕು ಎಂದು ಯಾವ ಕಾನೂನು ಹೇಳಿಲ್ಲ. ಕಾವೇರಿ ನ್ಯಾಯಾಧೀಕರಣವು ಈಗಾಗಲೇ ನೀರು ಹಂಚಿಕೆ ಮಾಡಿ ಆಗಿದೆ. ಹೀಗೆ ಯಾರ ನೀರನ್ನೂ ಯಾರೂ ಕಬಳಿಸಲು ಆಗಲ್ಲ. ಸುಪ್ರೀಂ ಕೋರ್ಟ್ ಕೂಡ ಕುಡಿಯುವ ನೀರು ಯೋಜನೆಗೆ ಯಾವುದೇ ಅಡಚಣೆ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ.
ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್, ರಾಷ್ಟ್ರೀಯ ಜಲ ಆಯೋಗ, ಕಾವೇರಿ ಪ್ರಾಧಿಕಾರ, ಕೇಂದ್ರ ಸರ್ಕಾರ ಸೇರಿದಂತೆ ಯಾರ ಅಭ್ಯಂತರವೂ ಇಲ್ಲ. ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಮಾತ್ರ ಬಾಕಿ ಉಳಿದಿದೆ. ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಈ ಅನುಮತಿ ಪಡೆಯಿರಿ ಎಂದು ಸಲಹೆ ನೀಡಿದರು.
ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರಲು ಇರುವ ಸುಲಭ ಮಾರ್ಗೋಪಾಯಗಳ ಬಗ್ಗೆ ರಾಜ್ಯದ ಪರ ವಕೀಲರು, ಕಾನೂನು ಸಲಹೆಗಾರರು ಸರಕಾರಕ್ಕೆ ಸಲಹೆ ಮಾಡಬೇಕು. ಇಲ್ಲದ ಅಡಚಣೆಗಳ ಬಗ್ಗೆ ಹೇಳಿ ಗೊಂದಲ ಸೃಷ್ಟಿಸಬಾರದು. ನೀವಿರುವುದು ಯೋಜನೆ ಅನುಷ್ಠಾನ ಸುಲಭ ಮಾಡುವ ಸಲಹೆ ನೀಡಲು. ಅದು ಬಿಟ್ಟು ಆಗಲ್ಲ, ನೋಡಬೇಕು ಅಂತ ಕತೆ ಹೇಳಬಾರದು. ರಾಜ್ಯ ಸರ್ಕಾರ ಅದನ್ನು ಜಾರಿಗೆ ತರಲು ಏನು ಮಾಡಬೇಕೋ ಅದನ್ನು ಮಾಡಲಿ ಎಂದು ಅಭಿಪ್ರಾಯ ತಿಳಿಸಿದರು.
ಪಾದಯಾತ್ರೆ ಮೇಲಿನ ಕೇಸ್ ವಾಪಸು ಪಡೆಯಿರಿ: ಸರ್ವಪಕ್ಷ ಸಭೆಯಲ್ಲಿ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದವರ ಮೇಲಿನ ಕೇಸ್ ವಿಷಯ ಪ್ರಸ್ತಾಪಿಸಿದ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪಾದಯಾತ್ರೆಯಲ್ಲಿ ಭಾಗಿಯಾದವರ ಮೇಲೆ ಸರ್ಕಾರ ಕೇಸ್ ಹಾಕಿದೆ. ಕೇಸ್ ಹಾಕಿಸಿಕೊಂಡವರಿಗೆ ನೋಟಿಸ್ ಜಾರಿಯಾಗಿದೆ. ಕೂಡಲೇ ಸರ್ಕಾರ ಕೇಸ್ ವಾಪಾಸ್ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕೇಸ್ ವಾಪಾಸ್ ತೆಗೆದುಕೊಳ್ಳಬೇಕಾದ್ರೆ ಎಲ್ಲರ ಮೇಲಿನ ಕೇಸ್ ವಾಪಾಸ್ ತೆಗೆದುಕೊಳ್ಳಬೇಕು. ಕಾನೂನು ಸಚಿವರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಕೇಂದ್ರದ ಮೇಲೆ ಒತ್ತಡ ಹೇರಬೇಕು:ಈ ಬಗ್ಗೆ ಮಾತನಾಡಿದ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶಂಪೂರ, ಎಲ್ಲರೂ ಒಂದಾಗಿ ಇಂದು ಜಲವಿವಾದ ಬಗ್ಗೆ ಸಿಎಂ ಬಳಿ ಹೇಳಿಕೊಂಡಿದ್ದೇವೆ. ಸಿಎಂ ಮುಂದೆ ಎಲ್ಲವನ್ನೂ ವ್ಯಕ್ತಪಡಿಸಿದ್ದೇವೆ. ಮೇಕೆದಾಟು, ಕೃಷ್ಣನದಿ ಜೋಡಣೆ ಬಗ್ಗೆ ಚರ್ಚೆಯಾಗಿದೆ. ಸಿಎಂಗೆ ಪೂರ್ಣ ಅಧಿಕಾರ ನೀಡಿದ್ದೇವೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ರಾಜ್ಯದ ಜನತೆ ಹಾಗೂ ರೈತರಿಗೆ ಈ ಯೋಜನೆಗಳು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಲಾಗಿದೆ ಎಂದರು.
ಇದನ್ನೂ ಓದಿ:ರಾಜ್ಯದ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ ನೀಡಲು ಬದ್ದ : ಸಚಿವ ನಿರಾಣಿ ಭರವಸೆ