ಬೆಂಗಳೂರು: ಕೆಎಎಸ್ ಪಾಸು ಮಾಡುವ ಕನಸು ಹೊತ್ತ ಅಭ್ಯರ್ಥಿಗಳನ್ನೇ ಗುರಿಯಾಗಿಸಿ ಮೋಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಐಎಎಸ್, ಐಪಿಎಸ್ ಅಧಿಕಾರಿಗಳ ಹೆಸರು ಹೇಳಿಕೊಂಡು ಅಭ್ಯರ್ಥಿಗಳಿಂದ 59 ಲಕ್ಷ ರೂ. ಪೀಕಿರುವ ಆರೋಪಿ ಸಿದ್ದರಾಜು ಕಟ್ಟಿಮನಿ ಎಂಬಾತ ಇದೀಗ ಸೆರೆ ಸಿಕ್ಕಿದ್ದಾನೆ.
ಕೆಎಎಸ್ ಪಾಸ್ ಮಾಡಿಸಿ ತಹಶೀಲ್ದಾರ್ ಹುದ್ದೆ ಕೊಡಿಸುವುದಾಗಿ ಹೇಳಿ ಈತ ಹಣ ಪಡೆದಿದ್ದಾನೆ. ಮೋಸಹೋದ ಯುವತಿ ವಿಜಯನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಸಿದ್ದರಾಜು ಕಟ್ಟಿಮನಿಯನ್ನು ಬಂಧಿಸಲಾಗಿದೆ. ಯುವತಿ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರದವರು. ಬೆಂಗಳೂರಿನಲ್ಲಿ ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗ ಯುವತಿಗೆ ಆರೋಪಿ ಪರಿಚಯವಾಗಿದ್ದ. ತನಗೆ ಐಎಎಸ್, ಐಪಿಎಸ್ ಅಧಿಕಾರಿಗಳು ಗೊತ್ತಿದ್ದು ಪಾಸ್ ಮಾಡಿಸುವುದಾಗಿ ಯುವತಿಗೆ ಭರವಸೆ ಕೊಟ್ಟಿದ್ದಾನೆ.
ಕೆಎಎಸ್ ಪರೀಕ್ಷೆ ಪಾಸಾಗಲು ಅಡ್ಡ ದಾರಿ ಹಿಡಿದ ಯುವತಿಗೆ 59 ಲಕ್ಷ ರೂಪಾಯಿ ವಂಚನೆ! ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ನನಗೆ ಪರಿಚಿತರೆಂದು ಸಿದ್ದರಾಜ್ ನಂಬಿಸಿದ್ದಾನೆ. ಈತನಿಗೆ ಮೊದಲ ಹಂತದಲ್ಲಿ 15 ಲಕ್ಷ ರೂ ಹಣ ನೀಡಿದ್ದ ಯುವತಿ, ಬಳಿಕ ಹಂತ ಹಂತವಾಗಿ 59 ಲಕ್ಷ ರೂ ನೀಡಿದ್ದರು. ಜಮೀನು ಅಡಮಾನವಿಟ್ಟು ಯುವತಿಯ ತಂದೆ ಹಣ ನೀಡಿದ್ದರಂತೆ. ಮತ್ತೆ ಮತ್ತೆ ಆರೋಪಿ ಹಣ ಕೇಳೋದನ್ನು ಗಮನಿಸಿದ ಸವಿತಾ ನಂಬಿಕೆ ಕಳೆದುಕೊಂಡು ಕೊಟ್ಟ ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಆಗ ಸಿದ್ದರಾಜು ಕಟ್ಟಿಮನಿ, ಏನ್ ಮಾಡ್ತಿಯೋ ಮಾಡ್ಕೋ, ಹಣ ವಾಪಸ್ ಕೊಡಲ್ಲ ಅಂದಿದ್ದಾನೆ. ಮತ್ತೆ ಮತ್ತೆ ಹಣ ಕೇಳಿದ್ರೆ ನಿಮ್ಮ ಮನೆಯಲ್ಲಿ ಯಾರನ್ನೂ ಉಳಿಸಲ್ಲವೆಂದೂ ಸವಿತಾಗೆ ಬೆದರಿಕೆ ಹಾಕಿದ್ದನಂತೆ.
ಕೆಲಸವೂ ಸಿಗದೇ ಹಣವನ್ನೂ ಕಳೆದುಕೊಂಡು ಯುವತಿ ಕುಟುಂಬ ಕಣ್ಣೀರು ಹಾಕುತ್ತಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 420 ಅಡಿ ಪ್ರಕರಣ ದಾಖಲಿಸಿಕೊಂದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳ: 24 ಗಂಟೆಯಲ್ಲಿ ಎರಡನೇ ಚಾಕು ಇರಿತ ಪ್ರಕರಣ - ಇಬ್ಬರಿಗೆ ಗಾಯ!