ಕರ್ನಾಟಕ

karnataka

ETV Bharat / state

ರಸ್ತೆ ಬದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವು ನೀಡಲು ಮುಂದಾದ SIDBI - ಈಟಿವಿ ಭಾರತ್​ ಕನ್ನಡ ನ್ಯೂಸ್

ಅಸುರಕ್ಷಿತ ಆವರ್ತ ಸಾಲ ನಿಧಿ ಯೋಜನೆ ಮೂಲಕ ರಸ್ತೆ ಬದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವು ನೀಡಲು ಸಿಡ್ಬಿ ಮುಂದಾಗಿದೆ.

ಸಿಡ್ಬಿ
ಸಿಡ್ಬಿ

By ETV Bharat Karnataka Team

Published : Aug 30, 2023, 9:52 PM IST

ಬೆಂಗಳೂರು : ಈವರೆಗೂ ಕೇವಲ ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಭಾರತೀಯ ಸಣ್ಣ ಉದ್ಯಮಗಳ ಅಭಿವೃದ್ಧಿ ಬ್ಯಾಂಕ್ (ಸಿಡ್ಬಿ) ಇದೀಗ ತರಕಾರಿ ಸೇರಿದಂತೆ ರಸ್ತೆಬದಿ ವ್ಯಾಪಾರಿಗಳಿಗೂ ಹಣಕಾಸಿನ ನೆರವು ನೀಡಲು ಸಿದ್ಧವಾಗಿದೆ ಎಂದು ಸಿಡ್ಬಿ ಉಪ ವ್ಯವಸ್ಥಾಪಕ ನಿರ್ದೇಶಕ ಸುದತ್ತ ಮಂಡಲ್ ತಿಳಿಸಿದ್ದಾರೆ.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಲ್ಲಿ ಸಿಡ್ಬಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಂಯುಕ್ತವಾಗಿ ಬುಧವಾರ ಹಮ್ಮಿಕೊಂಡಿದ್ದ ಆರ್ಥಿಕ ಸಾಕ್ಷರತೆ ಕುರಿತು ಔಟ್‌ರೀಚ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈವರೆಗೂ ಕೇವಲ ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ತರಕಾರಿ, ಹಣ್ಣು ಸೇರಿದಂತೆ ಬೀದಿ ಬದಿ ವ್ಯಾಪಾರ- ಉದ್ಯಮ ಆರಂಭಿಸಲು ಅಗತ್ಯವಿರುವ ಆರ್ಥಿಕ ನೆರವು ನೀಡುವ ಸಲುವಾಗಿ ಅಸುರಕ್ಷಿತ ಆವರ್ತ ಸಾಲ ನಿಧಿ ಯೋಜನೆ ಪರಿಚಯಿಸಲು ಸಿಡ್ಬಿ ಚಿಂತನೆ ನಡೆಸಿದೆ. ಶೀಘ್ರ ಇದು ಅಸ್ತಿತ್ವಕ್ಕೆ ಬರಲಿದ್ದು, ಲಕ್ಷಾಂತರ ವ್ಯಾಪಾರಿಗಳಿಗೆ ಇದರಿಂದ ಹಣಕಾಸಿನ ನೆರವು ಸಿಗಲಿದೆ ಎಂದು ವಿವರಿಸಿದರು.

ಸಣ್ಣ ವ್ಯಾಪಾರಿಗಳು ಮತ್ತು ನ್ಯಾನೊ ಎಂಟರ್‌ಪ್ರೈಸಸ್ ಆರಂಭಿಸಲು ಲಕ್ಷಾಂತರ ರೂಪಾಯಿ ಮೂಲ ಬಂಡವಾಳದ ಬೇಕಾಗುವುದಿಲ್ಲ. 10- 15 ದಿನಗಳ ಮಟ್ಟಿಗೆ 15ರಿಂದ 20 ಸಾವಿರ ರೂ. ಒದಗಿಸಿದರೆ ಸಾಕಾಗುತ್ತದೆ. ಉದ್ಯಮ್ ಅಡಿ ನೋಂದಣಿ ಮಾಡಿಕೊಂಡವರಿಗೆ ಯುಪಿಐ ವ್ಯವಸ್ಥೆ ಮೂಲಕ ನೇರವಾಗಿ ಈ ಹಣಕಾಸಿನ ನೆರವು ಒದಗಿಸಬಹುದಾಗಿದೆ. ಇದರ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದು, ಶೀಘ್ರ ಇದರ ಉಪಯೋಗ ನ್ಯಾನೊ ಎಂಟರ್‌ಪ್ರೈಸಸ್ ವರ್ಗಕ್ಕೆ ತಲುಪಲಿದೆ.

ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆ ಆಗುತ್ತಿರುವ ಜನಪ್ರಿಯ ಜನೌಷಧಿ ಮಳಿಗೆಗಳಿಗೂ ಅಗತ್ಯ ಸಾಲ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ. ದೇಶಾದ್ಯಂತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) 6.5 ಕೋಟಿ ಇವೆ. ಈ ಪೈಕಿ ಉದ್ಯಮ್ ಮೂಲಕ ನೋಂದಾಯಿಸಿಕೊಂಡ ಅಧಿಕೃತ ಎಂಎಸ್‌ಎಂಇಗಳು ಕೇವಲ 1.5 ಕೋಟಿ ಆಗಿವೆ. ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯ ಆಗಿರುವುದರಿಂದ ಬಹುತೇಕ ಉದ್ಯಮಿಗಳು ಇದರಡಿ ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣದಿಂದ ಪ್ಯಾನ್ ಸಂಖ್ಯೆ ಕಡ್ಡಾಯದಿಂದ ವಿನಾಯ್ತಿ ನೀಡಲಾಗಿದೆ ಎಂದು ಸುದತ್ತ ಮಾಹಿತಿ ನೀಡಿದರು.

ಆಯಾ ಬ್ಯಾಂಕ್‌ಗಳಲ್ಲಿ ಈಗಾಗಲೇ ಎಂಎಸ್‌ಎಂಇಗಳು ಕೆವೈಸಿ ಸಲ್ಲಿಸಿರುತ್ತಾರೆ. ಅವುಗಳನ್ನು ಆಧರಿಸಿ, ಉದ್ಯಮ್ ಅಡಿ ನೋಂದಾಯಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಇದರ ಪರಿಣಾಮ ಕಳೆದ ಎರಡು ತಿಂಗಳಲ್ಲಿ 65 ಲಕ್ಷ ನೋಂದಯಾಗಿವೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಎರಡು ಕೋಟಿ ನೋಂದ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಕಾಸಿಯಾ ಅಧ್ಯಕ್ಷ ಶಶಿಧರ್ ಶೆಟ್ಟಿ ಮಾತನಾಡಿ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳ ಸಬಲೀಕರಣಕ್ಕೆ ಸಿಡ್ಬಿ ಮತ್ತು ವಾಣಿಜ್ಯ ಇಲಾಖೆ ಹಾಗೂ ಕಾಸಿಯಾ ಕೈಗೊಂಡ ನಿರ್ಣಾಯಕ ಮತ್ತು ಸಂಯೋಜಿತ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಡ್ಬಿಯ ಪ್ರಧಾನ ವ್ಯವಸ್ಥಾಪಕ ಮತ್ತು ಪ್ರಾದೇಶಿಕ ಮುಖ್ಯಸ್ಥ ಸತ್ಯಕಿ ರಸ್ತೋಗಿ, ಕಾಸಿಯಾ ಪದಾಧಿಕಾರಿಗಳಾದ ಎಂ.ಜಿ.ರಾಜಗೋಪಾಲ್, ಶ್ರೇಯಾಂಸ್ ಕುಮಾರ್ ಜೈನ್, ಅರುಣ್ ಪಡಿಯಾರ್, ಮಲ್ಲೇಶ ಗೌಡ ಮತ್ತಿತರರು ಇದ್ದರು.

ಇದನ್ನೂ ಓದಿ :ಕಾರ್ಗೋ ಸೇವೆಗೆ ಮುಂದಾದ ಸಾರಿಗೆ ನಿಗಮ: ರಸ್ತೆಗಿಳಿಯಲಿವೆ ಕೆಎಸ್ಆರ್​ಟಿಸಿ ಟ್ರಕ್​ಗಳು...!

ABOUT THE AUTHOR

...view details