ಬೆಂಗಳೂರು:ಪಕ್ಷ ಹಾಗೂ ಸರ್ಕಾರದ ಆಂತರಿಕ ವಿಚಾರಗಳನ್ನು ಸಂಬಂಧಪಟ್ಟ ವೇದಿಕೆಗಳಲ್ಲಿ ಚರ್ಚಿಸಿ ಪರಿಹಾರ ಪರಿಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಈ ರೀತಿ ರಾಜ್ಯಪಾಲರಿಗೆ ಪತ್ರ ಬರೆಯುವುದು ಸರಿಯಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ನಡೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಕ್ಷೇಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಈ ರೀತಿ ಏಕಾಏಕಿ ರಾಜ್ಯಪಾಲರಿಗೆ ಪತ್ರ ಬರೆದಿರುವುದು ಸರಿಯಲ್ಲ. ಪಕ್ಷದ ನಾಯಕರ ಗಮನಕ್ಕೆ ತರಬೇಕಿತ್ತು. ಇಲ್ಲವೇ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಬಹುದಿತ್ತು. ಸಚಿವ ಸಂಪುಟದಲ್ಲಿಯೂ ಇದರ ಬಗ್ಗೆ ಪ್ರಸ್ತಾಪ ಮಾಡುವ ಅವಕಾಶವಿತ್ತು. ಆದರೆ, ಇದೆಲ್ಲವನ್ನೂ ಬಿಟ್ಟು ಪತ್ರದ ಮೂಲಕ ಹೈಕಮಾಂಡ್ ನಾಯಕರು ಮತ್ತು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ನಾಯಕರಿಗೆ ಪತ್ರದ ಮೂಲಕ ಮಾಹಿತಿ ನೀಡುವುದು ಒಪ್ಪ ಬಹುದಾದರೂ, ಸಂಪುಟ ಸದಸ್ಯರಾಗಿ ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದು ಸರಿಯಲ್ಲ ಎಂದರು.
ಸದ್ಯ ಪಂಚರಾಜ್ಯಗಳ ಚುನಾವಣೆ ಕರ್ನಾಟಕದ ಉಪಚುನಾವಣೆ ಮೇಲೆ ಹೈಕಮಾಂಡ್ ಗಮನ ಹರಿಸಿದ್ದು, ಚುನಾವಣಾ ಪ್ರಕ್ರಿಯೆ ಮುಗಿದ ನಂತರವಷ್ಟೇ ಈಶ್ವರಪ್ಪ ಬರೆದ ಪತ್ರದ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.