ಬೆಂಗಳೂರು: ಗ್ರಾಹಕರಿಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ, ಕೋಟ್ಯಂತರ ರೂಪಾಯಿ ಬ್ಯಾಂಕ್ ಹಣವನ್ನ ಬೇಕಾದವರಿಗೆ ಸಾಲ ನೀಡಲಾಗಿತ್ತು. ಇದೀಗ ಬ್ಯಾಂಕ್ನ ದಿವಾಳಿಗೆ ಕಾರಣರಾಗಿದ್ದವರ ಮನೆ ಹಾಗೂ ಕಚೇರಿ ಸೇರಿ 14 ಕಡೆಗಳಲ್ಲಿ ಏಕಕಾಲದಲ್ಲಿ ಸಿಸಿಬಿ ದಾಳಿ ಮಾಡಿ, ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ಜಪ್ತಿ ಮಾಡಿದೆ.
ರಾಘವೇಂದ್ರ ಕೋ-ಆಪರೇಟಿವ್, ವಸಿಷ್ಠ ಕೋ-ಆಪರೇಟಿವ್ ಹೀಗೆ ಹತ್ತು ಹಲವು ಕೋ-ಆಪರೇಟಿವ್ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಸಾಲು ಸಾಲು ನಾಮವನ್ನಿಟ್ಟು ಇದೀಗ ಕೈಕಟ್ಟಿ ಕುಳಿತಿವೆ. ಇಂತಹ ವಂಚನೆಯ ಬ್ಯಾಂಕ್ಗಳ ಪಟ್ಟಿಗೆ ಇದೀಗ ಮತ್ತೊಂದು ಬ್ಯಾಂಕ್ ಸೇರಿಕೊಂಡಿದೆ. ಅದುವೇ ಶುಶೃತಿ ಕೋ ಆಪರೇಟಿವ್ ಬ್ಯಾಂಕ್.
100 ಕೋಟಿಗೂ ಅಧಿಕ ಹಣ ವಂಚನೆ: 1998 ರಲ್ಲೇ ಸ್ಥಾಪನೆಯಾಗಿದ್ದ ಶುಶೃತಿ ಬ್ಯಾಂಕ್ಗೆ ಅಧ್ಯಕ್ಷನಾಗಿದ್ದ, ಶ್ರೀನಿವಾಸ ಮೂರ್ತಿ ನೇತೃತ್ವದಲ್ಲಿ ಆಡಳಿತ ಮಂಡಳಿಯು ಹೆಚ್ಚಿನ ಹಣ ಹೂಡಿದರೆ ಶೇ.8 ರಿಂದ 10 ರಷ್ಟು ಬಡ್ಡಿ ಹಣ ಕೊಡುವುದಾಗಿ ನಂಬಿಸಿ ಹೂಡಿಕೆ ಮಾಡಿಸಿಕೊಂಡಿತ್ತು. ನಂತರ ಕಾಲಕ್ರಮೇಣ ಹೂಡಿಕೆ ಹಣ ನೀಡದೆ ವಂಚಿಸುತಿತ್ತು. ಪರಿಚಯಸ್ಥರಿಂದ ಯಾವುದೇ ದಾಖಲಾತಿ ಪಡೆದುಕೊಳ್ಳದೇ ಲಕ್ಷಾಂತರ ರೂಪಾಯಿ ಸಾಲ ನೀಡುತ್ತಿದ್ದ ಬ್ಯಾಂಕ್, ಈವರೆಗೂ ಅಸಲು ಹಾಗೂ ಬಡ್ಡಿ ಹಣ ಕಟ್ಟಿರಲಿಲ್ಲ. ಸುಮಾರು 100 ಕೋಟಿ ಅಧಿಕ ಹಣ ವಂಚಿಸಿರುವುದು ತಿಳಿದುಬಂದಿದೆ.