ಬೆಂಗಳೂರು:ಪವಿತ್ರ ಕ್ಷೇತ್ರ ಶೃಂಗೇರಿ ಬಳಿ ಇತ್ತೀಚೆಗೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ನಿರ್ಲಕ್ಷಿಸುವ ಕಾರ್ಯ ಆಗಬಾರದು ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ ಒತ್ತಾಯಿಸಿದರು.
ವಿಧಾನಪರಿಷತ್ನಲ್ಲಿ ನಿಯಮ 68ರ ಅಡಿ ಮಾತನಾಡಿದ ಅವರು, ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ ನಿರಂತರವಾಗಿ 17 ಜನ ಅತ್ಯಾಚಾರ ಎಸಗಿದ್ದಾರೆ. 30-35 ಮಂದಿ ಅತ್ಯಾಚಾರ ಎಸಗಿದ್ದಾಗಿ ಮಾಹಿತಿ ಇದೆ. ಆದರೆ ಇದರ ದೂರು ಸ್ವೀಕರಿಸಲು ಪೊಲೀಸರು ಮೂರು ದಿನ ವಿಳಂಬ ಮಾಡಿದ್ದಾರೆ. ಈ ಘಟನೆಯ ಹಿಂದೆ ಕಾಣದ ಕೈಗಳಿವೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. 17 ಜನರನ್ನು ಬಾಲಕಿ ಪತ್ತೆ ಹಚ್ಚಿದ್ದರೂ, ಏಳು ಮಂದಿಯನ್ನು ಬಂಧಿಸಲಾಗಿದೆ. ಎ1 ಸಂಘ ಪರಿವಾರದವನು, ಎ2 ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ, ಮತ್ತೊಬ್ಬ ಜಿಲ್ಲಾ ಬಿಜೆಪಿ ಮುಖಂಡರ ಮಗ, ಈ ರೀತಿ 7-8 ಜನ ಇದ್ದಾರೆ. ಬಾಲಕಿ ಅನಾಥೆ. ಹಾವೇರಿಯಿಂದ ಬಂದವಳು. ತಾಯಿ ಇಲ್ಲ, ತಂದೆ ಬೇರೆ ವಿವಾಹವಾಗಿದ್ದಾನೆ. ತಾಯಿಯ ತಂಗಿ ಜತೆ ಶೃಂಗೇರಿಗೆ ಬಂದು ಕ್ರಶರ್ನಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಆದರೆ ಅವಳ ಈ ಸ್ಥಿತಿಗೆ ಕಾರಣವಾಗಿದ್ದು, ದುರ್ವಿಧಿ ಎಂದರು.
ಅತ್ಯಂತ ಘೋರ ಅಪರಾಧವಾದ ಈ ಘಟನೆಯ ವಿಚಾರದಲ್ಲಿ ಇಷ್ಟು ನಿರ್ಲಕ್ಷ್ಯ ಏಕೆ? 15 ವರ್ಷದ ಬಾಲಕಿ ಮೇಲೆ ನಿರಂತರವಾಗಿ ಎಷ್ಟೋ ದಿನ ಅತ್ಯಾಚಾರ ಎಸಗಲಾಗಿದೆ. ಈಗ ಅಧಿಕಾರಿಗಳು ರಕ್ಷಿಸಿ ದೂರು ದಾಖಲಿಸುವ ಕಾರ್ಯ ಆಗಿದೆ. ಬಲವಾದ ಸಾಕ್ಷ್ಯಾಧಾರ ಇದ್ದರೂ, ಕ್ರಮ ಆಗಿಲ್ಲ. ಗೃಹ ಇಲಾಖೆ ಏನು ಮಾಡುತ್ತಿದೆ. ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಕ್ರಶರ್ ಮಾಲೀಕರ ವಿರುದ್ಧ ಕ್ರಮ ಆಗಿಲ್ಲ ಏಕೆ? ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಪ್ರಕರಣ ಮುಚ್ಚಿ ಹಾಕುವ ಅನುಮಾನ ಇದೆ. ಗೃಹ ಸಚಿವರು ಎಚ್ಚೆತ್ತುಕೊಳ್ಳಬೇಕು. ಸ್ಥಳೀಯ ಸಂಸದರು ಸಣ್ಣ ಪುಟ್ಟ ವಿಚಾರಕ್ಕೆ ದನಿ ಎತ್ತುವ ಇವರು ಹೇಳಿಕೆ ನೀಡಿಲ್ಲ ಎಂದಾಗ ಗೃಹ ಸಚಿವರು ಎದ್ದು ನಿಂತು ಇಲ್ಲಿ ಇಲ್ಲದಿರುವವರ ಪ್ರಸ್ತಾಪ ಬೇಡ ಎಂದರು.