ಬೆಂಗಳೂರು:ಲಾಕ್ಡೌನ್ನಿಂದಾಗಿ ತಮ್ಮ ಊರುಗಳಿಗೆ ತೆರಳಲಾದೇ ಉಳಿದುಕೊಂಡಿದ್ದ ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರ "ಶ್ರಮಿಕ್" ಎಂಬ ವಿಶೇಷ ರೈಲು ಸಂಚಾರಕ್ಕೆ ಅನುಮತಿ ನೀಡಿದ್ದು, ಇಂದು ಚಿಕ್ಕಬಾಣಾವರ- ಮಾಲೂರಿನಿಂದ ರೈಲ್ವೇ ಸೇವೆಯನ್ನು ಕಲ್ಪಿಸಲಾಗಿದೆ.
ತಮ್ಮ ಊರುಗಳಿಗೆ ತೆರಳಲು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಟ್ರೈನ್ ವ್ಯವಸ್ಥೆ ಇದೆ ಎಂದುಕೊಂಡು ಅನೇಕ ಕಾರ್ಮಿಕರು ಮುಂಜಾನೆಯೇ ರೈಲ್ವೆ ಸ್ಟೇಷನ್ಗೆ ತೆರಳಿದ್ದಾರೆ. ಆದರೆ ಇಲ್ಲಿ ಟ್ರೈನ್ ಇಲ್ಲ ಚಿಕ್ಕಬಾಣಾವಾರ ಹೋಗಿ ಎಂದು ಪೊಲೀಸರು ಕಾರ್ಮಿಕರನ್ನು ಕಳುಹಿಸಿದ್ದಾರೆ.
ಚಿಕ್ಕಬಾಣಾವರದಲ್ಲೂ ಕೂಡ ಎಲ್ಲಾ ಕಾರ್ಮಿಕರಿಗೆ ಟ್ರೈನ್ ವ್ಯವಸ್ಥೆ ಇಲ್ಲ, ಬದಲಿಗೆ ಜಿಲ್ಲಾಡಳಿತದಲ್ಲಿ ನೋಂದಾಯಿತ ಕಾರ್ಮಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಯಾರೂ ಏಕಾಏಕಿ ರೈಲ್ವೆ ನಿಲ್ದಾಣಕ್ಕೆ ಬರಬೇಡಿ ಎಂದು ನೈರುತ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇಂದು ಶ್ರಮಿಕ್ ವಿಶೇಷ ರೈಲು ಚಿಕ್ಕಬಾಣಾವರದಿಂದ ಒಡಿಸ್ಸಾದ ಭುವನೇಶ್ವರ ನಗರಕ್ಕೆ ಹೊರಟಿದೆ. ಇದರಲ್ಲಿ ಸುಮಾರು 1,190 ಕಾರ್ಮಿಕರು ತೆರಳಿದ್ದು, ಇದಕ್ಕಾಗಿ ರಾಜ್ಯ ಸರ್ಕಾರವು ಕಾರ್ಮಿಕರು ರೈಲ್ವೇ ನಿಲ್ದಾಣಕ್ಕೆ ಬರಲು ಬಿಎಂಟಿಸಿ ಬಸ್ಸುಗಳನ್ನು ನಿಯೋಜನೆ ಮಾಡಿದೆ.
ಹೊರ ರಾಜ್ಯಕ್ಕೆ ರೈಲಿನಲ್ಲಿ ಕಾರ್ಮಿಕರು ಹೋಗಬೇಕಾದರೆ ಏನ್ ಮಾಡಬೇಕು?
ಅಂದಹಾಗೆ, ಟ್ರೈನ್‌ನಲ್ಲಿ ಹೊರ ರಾಜ್ಯ ಕಾರ್ಮಿಕರು ಹೇಗೆ ಹೋಗಬಹುದು ಅನ್ನೋ ಪ್ರಶ್ನೆ ಕಾಡುವುದು ಸಹಜ. ಮೊದಲು ಕಾರ್ಮಿಕರು ಜಿಲ್ಲಾಡಳಿದಲ್ಲಿ ಹೆಸರನ್ನು ನೋಂದಾಯಿಸಬೇಕು. ಆ ನಂತರ ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ನಡೆಸಿ ಆ ರಾಜ್ಯದ ಸರ್ಕಾರದ ಅನುಮತಿ ಪಡೆದು ಕಳುಹಿಸಿಕೊಡಲಾಗುತ್ತದೆ.
ಕೇವಲ ರಾಜ್ಯ ಸರ್ಕಾರ ಗುರುತಿಸಿದ ಮಂದಿಯನ್ನು ಮಾತ್ರ ಈ ರೈಲಿನಲ್ಲಿ ಕರೆದೊಯ್ಯಲಾಗುತ್ತದೆ. ರೈಲು ಸಂಚಾರ ಆರಂಭಿಸುವ ಸ್ಥಳ, ಮಾರ್ಗ, ತಲುಪಬೇಕಿರುವ ಸ್ಥಳವನ್ನು ಗುರುತಿಸಲಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ಪ್ರಯಾಣಿಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಿದೆ. ನಂತರ ಅವರನ್ನು ತಂಡಗಳಾಗಿ ವಿಂಗಡಿಸಿ ಪ್ರತ್ಯೇಕ ಬಸ್ನಲ್ಲಿ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತದೆ. ಅವರಿಗೆ ಊಟ ಹಾಗೂ ಕುಡಿಯುವ ನೀರನ್ನು ಸರ್ಕಾರವೇ ಪೂರೈಸಲಿದೆ. ಪ್ರತಿ ಪ್ರಯಾಣಿಕ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅತಿ ದೂರ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆ ಆಹಾರ ಪೂರೈಸಲಿದೆ.
ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು ಇಚ್ಚಿಸುವವರು ಹಾಗೂ ಕರ್ನಾಟಕದಿಂದ ಹೊರ ರಾಜ್ಯಕ್ಕೆ ಪ್ರಯಾಣಿಸುವರು ಸೇವಾ ಸಿಂಧು ಆಪ್ನಲ್ಲಿ ನೋಂದಾಯಿಸಿಕೊಳ್ಳಬೇಕು (https://Sevasindhu.Karnataka.gov.in/sevasindhu/English) ಸದ್ಯ ಇದು ಕೇವಲ ನೋಂದಣಿಯ ಮಾಹಿತಿಗಾಗಿ ಇದ್ದು, ಪ್ರಯಾಣದ ವಿವರ ರೈಲು ಸಂಚಾರದ ಮಾಹಿತಿಯನ್ನ ಶೀಘ್ರದಲ್ಲೇ ತಿಳಿಸಲಿದೆ.