ಕರ್ನಾಟಕ

karnataka

ETV Bharat / state

ಕಾರ್ಮಿಕರಿಗೆ ಸೂರು.. ರಾಜ್ಯದಲ್ಲಿ ಶ್ರಮಿಕ್ ನಿವಾಸ್ ಯೋಜನೆ ಶೀಘ್ರದಲ್ಲೇ ಲೋಕಾರ್ಪಣೆ

ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕಾರ್ಮಿಕ ಇಲಾಖೆಯಿಂದ ಜಾರಿಯಾಗಲಿರುವ ಶ್ರಮಿಕ ನಿವಾಸ್ ವಸತಿ ಯೋಜನೆ - ಮೊದಲ ಹಂತವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಶ್ರಮಿಕ್ ನಿವಾಸ್ ಬೃಹತ್ ವಸತಿ ಸಮುಚ್ಚಯ ಉದ್ಘಾಟನೆಗೆ ಸಜ್ಜು

Shramik Niwas programme Inauguration soon in stat
ಶ್ರಮಿಕ ವರ್ಗಕ್ಕೆ ವಸತಿ ಸೌಲಭ್ಯ: ರಾಜ್ಯದಲ್ಲಿ ಶ್ರಮಿಕ್ ನಿವಾಸ್ ಯೋಜನೆ ಶೀಘ್ರದಲ್ಲೇ ಲೋಕಾರ್ಪಣೆ

By

Published : Mar 5, 2023, 7:19 PM IST

ಬೆಂಗಳೂರು: ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕಾರ್ಮಿಕ ಇಲಾಖೆಯಿಂದ ಶ್ರಮಿಕರಿಗೆ ಶ್ರಮಿಕ ನಿವಾಸ್ ವಸತಿ ಯೋಜನೆ ಜಾರಿಗೆ ಬರಲಿದೆ. ಕಾರ್ಮಿಕರಿಗೆ ಸೂರು ಒದಗಿಸುವ ಮಹಾತ್ವಾಕಾಂಕ್ಷೆಯ ಯೋಜನೆ ಶ್ರಮಿಕ್ ನಿವಾಸ್ ಯೋಜನೆ ಶೀಘ್ರವೇ ಜಾರಿ ಆಗಲಿದೆ.

ರಾಜ್ಯದಲ್ಲಿನ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರಮಿಕ ವರ್ಗದ ಪಾತ್ರ ಮಹತ್ವದ್ದಾಗಿದೆ. ಹೀಗೆ ವಿವಿಧೆಡೆ ಕಾರ್ಯ ನಿರ್ವಹಿಸಲು ಆಗಮಿಸುವ ಕಾರ್ಮಿಕ ವರ್ಗ ರಸ್ತೆ ಬದಿ ಮತ್ತು ನೈರ್ಮಲ್ಯಯುತ ಪ್ರದೇಶಗಳಲ್ಲಿ ಗುಡಿಸಲು ಹಾಕಿಕೊಂಡು ಕಾರ್ಯ ನಿರ್ವಹಿಸುವ ಪರಿಸ್ಥಿತಿ ಸರ್ವೇ ಸಾಮಾನ್ಯ. ಇಂತಹ ಸ್ಥಳಗಳಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ಬದುಕು ಸಾಗಿಸುವುದರಿಂದ ಅವರಿಗೆ ಮೂಲಭೂತ ಸೌಕರ್ಯದ ಕೊರತೆ ಜೊತೆಗೆ ಅನಾರೋಗ್ಯ ಸಮಸ್ಯೆ ಕೂಡಾ ಕಾಡುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡ ಕಾರ್ಮಿಕ ಇಲಾಖೆ ಶ್ರಮಿಕ ವರ್ಗಕ್ಕೆ ವಸತಿ ಸೌಲಭ್ಯ ಒದಗಿಸುವ ಶ್ರಮಿಕ್ ನಿವಾಸ್ ಯೋಜನೆ ಜಾರಿಗೆ ಸಜ್ಜಾಗಿದೆ.

ಕೈಗಾರಿಕಾ ಪ್ರದೇಶಗಳು ಸೇರಿದಂತೆ ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ ಶ್ರಮಿಕ್ ನಿವಾಸ್ ಯೋಜನೆಯಡಿ ಶ್ರಮಿಕ ವರ್ಗಕ್ಕೆ ವಸತಿ ನೀಡುವ ಸಲುವಾಗಿ ವಸತಿ ಸಮುಚ್ಚಯ ಹಾಗೂ ಬಿಡಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ಯೋಜನೆಯ ಮೊದಲ ಹಂತವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ “ಶ್ರಮಿಕ್ ನಿವಾಸ್- ಬೃಹತ್ ವಸತಿ ಸಮುಚ್ಚಯ’ ಉದ್ಘಾಟನೆಗೆ ಸಜ್ಜಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಕೈಗಾರಿಕಾ ವಲಯದ ಬದನಹಳ್ಳಿಯಲ್ಲಿ ಬೃಹತ್ ಏಕ ವಸತಿ ಮತ್ತು ಕುಟುಂಬ ವಸತಿಯ ಸಮುಚ್ಚಯ ನಿರ್ಮಾಣವಾಗಿದೆ.

ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ವಸತಿ ವ್ಯವಸ್ಥೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಏಕ ವ್ಯಕ್ತಿ ಸಮುಚ್ಚಯದಲ್ಲಿ ಸಾಮೂಹಿಕ ವಸತಿಗೆ ಅವಕಾಶವಿದೆ. ಏಕ ಹಾಸಿಗೆ ವ್ಯವಸ್ಥೆಯಡಿ 96 ಕಾರ್ಮಿಕರು ಮತ್ತು ದ್ವಿ ಹಾಸಿಗೆ ವ್ಯವಸ್ಥೆಯಡಿ 196 ಕಾರ್ಮಿಕರಿಗೆ ವಸತಿ ಅನುಕೂಲ ಲಭಿಸಲಿದೆ. ಇನ್ನು ಕುಟುಂಬದೊಂದಿಗೆ ಉಳಿದುಕೊಳ್ಳಲು ಬಯಸುವ ಕಾರ್ಮಿಕರಿಗೆ ಪ್ರತ್ಯೇಕ ಮನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಒಂದು ಕುಟುಂಬದಲ್ಲಿ ನಾಲ್ಕು ಮಂದಿ ಎಂಬಂತೆ 48 ಕಾರ್ಮಿಕ ಕುಟುಂಬಗಳಿಗೆ ಮೊದಲ ಹಂತದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.

ಮೂಲ ಸೌಕರ್ಯಕ್ಕೂ ಆದ್ಯತೆ:ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಜಾರಿ ಮಾಡಲಾಗುತ್ತಿರುವ “ಶ್ರಮಿಕ್ ನಿವಾಸ್” ಯೋಜನೆಯಡಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗಕ್ಕೆ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಕ್ಕೂ ಆದ್ಯತೆ ನೀಡಲಾಗಿದೆ. ಈ ವಸತಿ ಸಮುಚ್ಚಯಗಳನ್ನು ಇಲಾಖೆಯೇ ನಿರ್ವಹಿಸಲಿದ್ದು, ಕಾರ್ಮಿಕ ಮಂಡಳಿ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರಿಗೆ ಈ ವಸತಿ ಸೌಲಭ್ಯ ದೊರೆಯಲಿದೆ.

ರಾಜ್ಯ ಕಾರ್ಮಿಕ ಇಲಾಖೆ ಜಾರಿ ಮಾಡಿರುವ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಶ್ರಮಿಕ ವರ್ಗದ, ಅದರಲ್ಲೂ ವಲಸೆ ಕಾರ್ಮಿಕರ, ಬಹು ದಿನಗಳ ವಸತಿ ಸಮಸ್ಯೆ ನಿವಾರಣೆ ಆಗಲಿದೆ. ಕಾರ್ಮಿಕ ವರ್ಗದ ಅದರಲ್ಲೂ ವಲಸೆ ಕಾರ್ಮಿಕರಿಗೆ ವಸತಿ ಬಹುದೊಡ್ಡ ಸಮಸ್ಯೆಯಾಗಿತ್ತು. ಮಲಿನ ಸ್ಥಳಗಳಲ್ಲಿ ನೆಲೆಯೂರುವ ಅನಿವಾರ್ಯತೆಯಿಂದ ಶ್ರಮಿಕ ವರ್ಗ ಮಾನಸಿಕವಾಗಿ ಹಿಂದುಳಿಯುವಂತೆ ಆಗಿತ್ತು. ಕಾರ್ಮಿಕರು ಹೆಮ್ಮೆಯಿಂದ ಬದುಕು ಸಾಗಿಸುವ ಸಲುವಾಗಿ ವಸತಿ ವ್ಯವಸ್ಥೆಗಾಗಿ “ಶ್ರಮಿಕ್ ನಿವಾಸ್” ಜಾರಿ ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ “ಶ್ರಮಿಕ್ ನಿವಾಸ್” ವಸತಿ ಸಮುಚ್ಚಯ ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ.

ಇದನ್ನೂ ಓದಿ:ಸಂಧ್ಯಾ ಸುರಕ್ಷಾ ಯೋಜನೆ ದುರ್ಬಳಕೆ : ಕಾಸು ಕೊಟ್ಟರೆ ಯುವಕರಿಗೂ ವೃದ್ಧಾಪ್ಯ ವೇತನ!

ABOUT THE AUTHOR

...view details