ಬೆಂಗಳೂರು:ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಹುದ್ದೆಗಳಿಗೆ ನೇಮಕ ಮಾಡುವ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಕನ್ನಡಿಗರಿಗೆ ಮೋಸ ಮಾಡಿದ್ದು, ಕನ್ನಡದಲ್ಲಿ ಪರೀಕ್ಷೆ ಬರೆಯಲು ಆಸ್ಪದ ನೀಡದೆ ದ್ರೋಹ ಎಸಗಿದೆ. ಈ ಕೂಡಲೇ ಕನ್ನಡದಲ್ಲಿ ಪರೀಕ್ಷೆ ಬರೆಯಲು ಆಸ್ಪದ ನೀಡದಿದ್ದರೆ ಪರೀಕ್ಷೆ ನಡೆಯಲು ಬಿಡುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಎಚ್ಚರಿಕೆ ನೀಡಿದರು.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ 25 ಜನ ನಾಲಾಯಕ್ ಸಂಸದರು ಹಾಗೂ ಕುರ್ಚಿಗೆ ಅಂಟಿಕೊಂಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಅನ್ಯಾಯದ ಬಗ್ಗೆ ಕಿಂಚಿತ್ತೂ ದನಿ ಎತ್ತದೆ ಕನ್ನಡಿಗರ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಕ್ಷ ಸುದ್ದಿಗೋಷ್ಠಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಕೇವಲ ಬಾಯಿ ಮಾತಿಗೆ "ಕನ್ನಡ ಕಾಯಕ ವರ್ಷ" ಎಂದು ಘೋಷಿಸದೆ ಕನ್ನಡಿಗರು ಗೌರವಯುತ ಜೀವನ ನಡೆಸಲು ಪ್ರಯತ್ನ ಮಾಡಿ ಹಾಗೂ ಕೇಂದ್ರ ಸರ್ಕಾರಕ್ಕೆ ಈ ವಿಷಯದ ಕುರಿತು ಮನವರಿಕೆ ಮಾಡಿಕೊಡಿ ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಹುಟ್ಟಿ, ಹೆಮ್ಮರವಾಗಿ ಬೆಳೆದು ನಿಂತ ಕನ್ನಡ ನೆಲದ ಬ್ಯಾಂಕ್‌ಗಳನ್ನು ವಿಲೀನ ಮಾಡುವಾಗಲೂ ಉಸಿರೆತ್ತದ 25 ಜನ ಸಂಸದರೇ ಹೇಡಿತನ ಬಿಟ್ಟು ಕೇಂದ್ರ ಸರ್ಕಾರದ ಬಳಿ ಮಾತನಾಡಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ತಲೆಮರೆಸಿಕೊಳ್ಳಿ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ 25 ಜನ ಸಂಸದರ ನಡೆಯಿಂದ ಅನೇಕ ವರ್ಷಗಳ ಹೋರಾಟಕ್ಕೆ ಬೆಲೆ ಇಲ್ಲದಂದಾಗಿದೆ. ಕಳೆದ ವರ್ಷ ಸಂಸತ್ತಿನಲ್ಲಿ ಮುಂದಿನ ಬಾರಿಯ ಎಲ್ಲಾ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಸ್ಥಾನ ನೀಡಲಾಗುವುದು ಎಂದು ಭರವಸೆ ನೀಡಿದ್ದ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಪ್ರತ್ಯೇಕ ದ್ರಾವಿಡ ನಾಡು ಚರ್ಚೆ ಮುನ್ನೆಲೆಗೆ ಬಂದಿದ್ದು, ಇದರಿಂದ ದೇಶದ ಒಕ್ಕೂಟ ವ್ಯವಸ್ಥೆಗೆ, ಆತಂರಿಕ ಭದ್ರತೆಗೆ ಸಾಕಷ್ಟು ತೊಂದರೆ ಆಗಲಿದೆ. ಪ್ರಾದೇಶಿಕತೆಗೆ ಅನುಗುಣವಾಗಿ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಸರಿಯಾಗಿ ನಡೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಕನ್ನಡದಲ್ಲಿಯೇ ವ್ಯವಹಾರ ನಡೆಸಲು ಅನುಕೂಲವಾಗಬೇಕು ಮತ್ತು ರಾಜ್ಯದ ಅಭ್ಯರ್ಥಿಗಳಿಗೇ ಅವಕಾಶ ದೊರೆಯಬೇಕೆಂಬ ಉದ್ದೇಶದಿಂದ ಬ್ಯಾಂಕ್ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಬದಲಾವಣೆ ತರುವಂತೆ ಆಮ್ ಆದ್ಮಿ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಚಳವಳಿ ನಡೆಸಿತ್ತು. ಈಗ ಬೀದಿಗೆ ಇಳಿದು ಕರ್ನಾಟಕದ ಯುವ ಜನತೆಗೆ ನ್ಯಾಯ ಸಿಗುವ ತನಕ ಹೋರಾಟ ನಡೆಸುತ್ತದೆ ಎಂದು ಹೇಳಿದರು.
ಹುದ್ದೆಗಳ ಸಂಖ್ಯೆ ಹೆಚ್ಚಿಸಿ:ಪ್ರಸ್ತುತ ಕೇವಲ ಮೂರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಒಟ್ಟು 1,200 ಹುದ್ದೆಗಳಿಗೆ ಮಾತ್ರ ನೇಮಕ ನಡೆಯಲಿದೆ. ಈ ಸಂಖ್ಯೆಯನ್ನು ನೋಡಿದರೆ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಉಪಯೋಗವಾಗಲಿದೆ. ಆದ ಕಾರಣ ಕೇಂದ್ರ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.