ಬೆಂಗಳೂರು: ನಾಗಪುರದಲ್ಲಿ ಸ್ವಾಮೀಜಿ ಹತ್ಯೆಗೆ ಕಾರಣವನ್ನು ಬಹಿರಂಗ ಪಡಿಸಬೇಕು. ಈ ಸಂಬಂಧ ನಮ್ಮ ಗೃಹ ಸಚಿವರು ಅಲ್ಲಿನ ಗೃಹ ಸಚಿವರ ಜೊತೆ ಚರ್ಚಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಬೆಂಗಳೂರಿನ ವೀರಶೈವ ಮಹಾಸಭಾ ಕಚೇರಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗ್ರಾಮ ಮಠವೊಂದರಲ್ಲಿ ಕರ್ನಾಟಕ ಮೂಲದ ಸ್ವಾಮೀಜಿಗಳಾದ ಶ್ರೀ ನಿರ್ಣಯ ರುದ್ರಪಶುಪತಿ ಶಿವಾಚಾರ್ಯರು ಮತ್ತು ಅವರ ಸಹಾಯಕರನ್ನು ಹತ್ಯೆ ಮಾಡಿರುವ ಘಟನೆ ಅತ್ಯಂತ ಖಂಡನೀಯ. ಈ ವಿಷಯ ಕುರಿತು ಇಂದು ಮಹಾರಾಷ್ಟ್ರದ ಗೃಹ ಮಂತ್ರಿ ಅನಿಲ್ ದೇಶಮುಖ್ ಹಾಗೂ ಸಚಿವರಾದ ಅಮಿತ್ ದೇಶಮುಖ್ ಜತೆಗೆ ಮಾತನಾಡಿ ಆದಷ್ಟು ಬೇಗ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯನ್ನು ನೀಡಬೇಕು. ಮಹಾರಾಷ್ಟ್ರದಲ್ಲಿರುವ ಎಲ್ಲ ಮಠಗಳಿಗೆ ಭದ್ರತೆಯನ್ನು ನೀಡಬೇಕು ಎಂದು ವಿನಂತಿಸಿಕೊಂಡಿದ್ದೇನೆ. ಇದಕ್ಕೆ ಪೂರಕವಾಗಿ ಸಚಿವರು ರಕ್ಷಣೆ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು.