ಬೆಂಗಳೂರು: ರಾಜ್ಯ ಇದೀಗ ಬರದ ಸಂಕಷ್ಟಕ್ಕೆ ಸಿಲುಕಿದೆ. ಜಲಾಶಯಗಳಲ್ಲಿ ನೀರು ಬರಿದಾಗಿದ್ದು, ವಿದ್ಯುತ್ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಇತ್ತ ಹೆಚ್ಚಾಗಿರುವ ವಿದ್ಯುತ್ ಬೇಡಿಕೆ ನೀಗಿಸಲು ಎಸ್ಕಾಂಗಳು ಈ ಬಾರಿ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ಖರೀದಿ ಮೊರೆ ಹೋಗಿವೆ.
ಸದ್ಯಕ್ಕೆ ರಾಜ್ಯ ಬರದ ಅಂಚಿನಲ್ಲಿದೆ. ಮಳೆಯ ಕೊರತೆ ತೀವ್ರವಾಗಿದ್ದು, 196 ತಾಲೂಕುಗಳು ಬರದ ಸಮಸ್ಯೆಗೆ ಸಿಲುಕಿವೆ. ಮಳೆ ಕೊರತೆ ಹಿನ್ನೆಲೆ ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳು ಬರಿದಾಗುತ್ತಿವೆ. ತಾಪಮಾನ ಹೆಚ್ಚಾಗಿದ್ದು, ಜನರ ವಿದ್ಯುತ್ ಬೇಡಿಕೆಯೂ ಹೆಚ್ಚಾಗಿದೆ. ಮಳೆ ಕ್ಷಾಮ ಈ ಬಾರಿ ವಿದ್ಯುತ್ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಲ್ಲಿದ್ದಲು ವಿದ್ಯುತ್ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿಲ್ಲ.
ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ ಕಂಡಿರುವುದರಿಂದ ಪ್ರಮುಖ ಮೂರು ಜಲ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯೂ ಕುಸಿತ ಕಂಡಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಜಲ ವಿದ್ಯುತ್ ಘಟಕಗಳಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಈ ಬಾರಿ ಮಳೆ ಕೈ ಕೊಟ್ಟಿರುವುದರಿಂದ ಜಲ ವಿದ್ಯುತ್ ಘಟಕಗಳಿಂದ ವಿದ್ಯುತ್ ಉತ್ಪಾದನೆ ತೀವ್ರ ಕುಸಿತ ಕಂಡಿದೆ. ಹೀಗಾಗಿ, ಎಸ್ಕಾಂಗಳು ಏರುತ್ತಿರುವ ವಿದ್ಯುತ್ ಬೇಡಿಕೆ ಈಡೇರಿಸಲು ಕಸರತ್ತು ನಡೆಸುತ್ತಿವೆ.
ವಿದ್ಯುತ್ ಖರೀದಿಯಲ್ಲಿ ಗಣನೀಯ ಹೆಚ್ಚಳ: ರಾಜ್ಯದ ಜಲಾಶಯಗಳು ಬರಿದಾಗುತ್ತಿರುವ ಹಿನ್ನೆಲೆ ಜಲ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ರಾಜ್ಯದ ವಿದ್ಯುತ್ ಬೇಡಿಕೆ ಈಡೇರಿಸಲು ಎಸ್ಕಾಂಗಳಿಗೆ ವಿದ್ಯುತ್ ಖರೀದಿ ಅನಿವಾರ್ಯವಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಎಸ್ಕಾಂಗಳು ಹೆಚ್ಚಿನ ವಿದ್ಯುತ್ ಖರೀದಿ ಮಾಡುವುದಿಲ್ಲ. ಆದರೆ, ಈ ಬಾರಿ ಬರದ ಛಾಯೆ ಇದ್ದು, ವಿದ್ಯುತ್ ಉತ್ಪಾದನೆ ಕುಸಿತ ಕಂಡಿರುವ ಕಾರಣ ಎಸ್ಕಾಂಗಳು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಖರೀದಿ ನಡೆಸುತ್ತಿವೆ.
ಇಂಧನ ಇಲಾಖೆಯ ಅಂಕಿ ಅಂಶದಂತೆ ಈ ವರ್ಷದ ಆಗಸ್ಟ್ ಅಂತ್ಯದವರೆಗೆ ಒಟ್ಟು 942.43 ಮಿ.ಯು. ವಿದ್ಯುತ್ ಖರೀದಿ ಮಾಡಲಾಗಿದೆ. ಈ ಪೈಕಿ ದಾಮೋದರ್ ವ್ಯಾಲಿ ಕಾರ್ಪೊರೇಷನ್ ನಿಂದ ಸುಮಾರು 232.17 ಮಿ.ಯು. ವಿದ್ಯುತ್ ಖರೀದಿಸಲಾಗಿದೆ. ವಿದ್ಯುತ್ ಖರೀದಿ ಒಪ್ಪಂದದಂತೆ ಉಡುಪಿ ಪವರ್ ಕಾರ್ಪೊರೇಷನ್ ಲಿ. ನಿಂದ ಎಸ್ಕಾಂಗಳಿಗೆ 328.92 ಮಿ.ಯು. ವಿದ್ಯುತ್ ಖರೀದಿ ಮಾಡಲಾಗಿದೆ. ಇನ್ನು ಬ್ಯಾಂಕ್ಡ್ ಪವರ್ ರಿಟರ್ನ್ಸ್ ಮೂಲಕ 381.33 ಮಿ.ಯು. ವಿದ್ಯುತ್ ಖರೀದಿ ಮಾಡಲಾಗಿದೆ.