ಬೆಂಗಳೂರು: ಅಗತ್ಯ ವಸ್ತುಗಳ ಖರೀದಿ ಆಯ್ತು, ಇದೀಗ ಕೋವಿಡ್ ಲಸಿಕೆ ಪಡೆಯಲು ಜನ ಲಸಿಕಾ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದಾರೆ.
ನಗರದ ಮಲ್ಲೇಶ್ವರದ ಕೆಸಿ ಜನರಲ್ ಅಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ಕಾದು ನಿಂತ ದೃಶ್ಯ ಕಂಡು ಬಂತು. ಹಿರಿಯ ನಾಗರಿಕರು, ಯುವ ಜನರು ಸೇರಿದಂತೆ 100ಕ್ಕೂ ಅಧಿಕ ಮಂದಿ ಸರತಿ ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ 9:30ಕ್ಕೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಲಸಿಕೆ ವಿತರಣೆ ಪ್ರಾರಂಭಗೊಂಡಿದೆ. ಈ ನಡುವೆ ನಗರದ ಕೆಲ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಕೊರತೆ ಎದುರಾಗಿದೆ.
ಸಾರ್ವಜನಿಕರ ಅಳಲು: ವಾರದಿಂದ ಸುತ್ತಾಡಿದರೂ ಲಸಿಕೆ ಸಿಗುತ್ತಿಲ್ಲ. ಪ್ರತಿದಿನ ಅಸ್ಪತ್ರೆಗೆ ಬಂದು ವಾಪಸ್ ಹೋಗುತ್ತಿದ್ದೇವೆ. ಆರೇಳು ವಾರ ಕಳೆದರೂ ಎರಡನೇ ಡೋಸ್ ಲಸಿಕೆ ಸಿಕ್ಕಿಲ್ಲ. ಲಾಕ್ಡೌನ್ ನಡುವೆ ಪ್ರತಿದಿನ ಬರುವುದು ಕಷ್ಟವಾಗ್ತಿದೆ. ರಸ್ತೆಗಿಳಿದರೆ ಪೊಲೀಸರ ಕಾಟ. ಅವರಿಗೆ ದಿನಾಲು ಸಮಜಾಯಿಸಿ ನೀಡಲು ನಮ್ಮಿಂದ ಆಗುತ್ತಿಲ್ಲ. ನಮ್ಮಲ್ಲಿ ಯಾವುದೇ ದಾಖಲೆ ಇಲ್ಲ, ಮೆಸೇಜ್ ತೋರಿಸಿದರೆ ಅವರು ಕೇಳಲ್ಲ ಎಂದು ಸಾರ್ವಜನಿಕರು ಆಳಲು ತೋಡಿಕೊಂಡಿದ್ದಾರೆ.