ಬೆಂಗಳೂರು :ಹಳೆ ಮೈಸೂರು ಭಾಗದಲ್ಲಿ ಪಕ್ಷ ಬೆಳೆಸಲು ಲಾಂಗ್ ಟರ್ಮ್ ತಂತ್ರ ಮತ್ತು ಚುನಾವಣೆಗಾಗಿ ಶಾರ್ಟ್ ಟರ್ಮ್ ತಂತ್ರ ಎರಡೂ ನಮ್ಮ ಬಳಿ ಸಿದ್ಧವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ನಗರದ ಅಧಿಕೃತ ನಿವಾಸದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 2008 ಮತ್ತು 2018ರಲ್ಲಿ ಬಿಜೆಪಿ ಪರ ಅಲೆ ಇದ್ದರೂ ಗುರಿ ಮುಟ್ಟಲು ಆಗಿರಲಿಲ್ಲ. ಹಳೆ ಮೈಸೂರು ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಾವುದೇ ಪಕ್ಷ ಯಶಸ್ವಿ ಆಗಲು ಸಾಧ್ಯವಿಲ್ಲ. ನಾವು ಯಾರ ಮೇಲೂ ಅವಲಂಬಿತರಾಗದೇ ಸರ್ಕಾರ ರಚಿಸಲು ಅಲ್ಲಿ ಸಂಘಟನೆ ಮಾಡಬೇಕು. ಹಾಗಾಗಿ 2023 ರಲ್ಲಿ ಗೆಲ್ಲುವ ಶಾರ್ಟ್ ಟರ್ಮ್, ಪಕ್ಷ ಸಂಘಟನೆಯ ಲಾಂಗ್ ಟರ್ಮ್ ಯೋಜನೆ ಮಾಡುತ್ತಿದ್ದೇವೆ. ಹಳೆ ಮೈಸೂರು ಭಾಗದಲ್ಲಿ ನಾವು ದುರ್ಬಲರಾಗಿದ್ದೇವೆ. ಪಕ್ಷ ಬೆಳೆಸುವುದು ನಿರಂತರ ಕಾರ್ಯ, ಅದನ್ನು ನಾವು ಮಾಡುತ್ತೇವೆ. ಅದಕ್ಕೆ ಏನು ಬೇಕಾದರೂ ಹೆಸರು ಕೊಡಬಹುದು, ಅಲ್ಲಿ ಈಗಾಗಲೇ ಪ್ರಭಾವಿಗಳ ಸಂಪರ್ಕದಲ್ಲಿದ್ದೇವೆ, ಟಾರ್ಗೆಟ್ ಇಟ್ಟುಕೊಂಡು ಸಂಪರ್ಕ ಮಾಡುತ್ತೇವೆ ಎಂದು ಹೇಳಿದರು.
ಮಂಡ್ಯದಲ್ಲಿ ಭಾಷಣ ಮಾಡುವ ವೇಳೆ ಮುಲ್ಲಾಸಾಬ್ vs ಮುಡಲಗಿರಿ ಹನುಮಪ್ಪ ಎಂದಿದ್ದ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿ ಟಿ ರವಿ, ಹನುಮನ ದೇವಸ್ಥಾನದ ಮೇಲೆ ಮಸೀದಿ ಕಟ್ಟಿರೋದು ಅಂಗೈ ಹುಣ್ಣಿನಷ್ಟೇ ಸತ್ಯ. ಹಾಗಾಗಿ ಆ ಮಾತು ಹೇಳಿದ್ದೇನೆ. ಅಭಿವೃದ್ಧಿ ಮಾಡಿದ್ದು ಒಡೆಯರ್, ಆದರೆ ಕಾಂಗ್ರೆಸ್ ನವರು ಟಿಪ್ಪು ಅಭಿವೃದ್ಧಿ ಮಾಡಿದ ಅಂತಾರೆ. ಅವರು ಟಿಪ್ಪುವಿನ ಕ್ರೌರ್ಯವನ್ನು ವೈಭವೀಕರಿಸ್ತಾರೆ. ಹೀಗಾಗಿ ಟಿಪ್ಪು vs ಒಡೆಯರ್ ನಡುವಿನ ಚುನಾವಣೆ ಎಂದಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣ: ಈ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ ಅವರು, ರಾಮನ ಹೆಸರು ಇಟ್ಟುಕೊಂಡು ಇರುವ ನಗರವೇ ರಾಮನಗರ. ರಾಮಮಂದಿರ ನಿರ್ಮಾಣ ನಿಲುವನ್ನು ಪಕ್ಷಾತೀತವಾಗಿ ಸ್ವಾಗತಿಸಬೇಕು, ಅದನ್ನು ಯಾಕೆ ವಿವಾದ ಮಾಡಬೇಕು? ಅಲ್ಲಿ ಏನು ಮಾಡಬೇಕು ಅಂತ ಬಯಸುತ್ತೀರಿ? ನಮಗೆ ಅವಕಾಶ ಸಿಕ್ಕಿದೆ, ಈಗ ಮಾಡುತ್ತಿದ್ದೇವೆ, ರಾಮನಗರದಲ್ಲಿ ರಾಮಮಂದಿರವನ್ನು ನಾವೇ ನಿರ್ಮಾಣ ಮಾಡುತ್ತೇವೆ ಎಂದು ಈಗ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಅವರ ನಿಲುವನ್ನು ಸ್ವಾಗತಿಸುತ್ತೇನೆ ಎಂದರು.
ರಿಪೋರ್ಟ್ ಕಾರ್ಡ್ ಇಟ್ಟು ಮತ ಕೇಳುತ್ತೇವೆ:ಮಂಡ್ಯ ಭಾಗದಲ್ಲಿ ಬಿಜೆಪಿ ಸಾಧನೆ ಏನು ಎಂಬ ಕುಮಾರಸ್ವಾಮಿ ಪ್ರಶ್ನೆಗೆ ಪ್ರತಿಕ್ರಿಯಿಸಿ ನಾವು ನಮ್ಮ ರಿಪೋರ್ಟ್ ಕಾರ್ಡ್ ಇಟ್ಟು ಎಲೆಕ್ಷನ್ ಗೆ ಹೋಗುತ್ತೇವೆ. ಹಾಲಿಗೆ ಸಬ್ಸಿಡಿ ಕೊಟ್ಟಿದ್ದು ಬಿಜೆಪಿ, ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ 10 ಸಾವಿರ ಕೊಟ್ಟಿದ್ದು ನಮ್ಮ ಸರ್ಕಾರ, ಅವಾಗ ಇದನ್ನೆಲ್ಲ ಅವರು ನಮ್ದು ಅಂತ ಹೇಳೋಕೆ ಆಗುತ್ತಾ? ಐದು ವರ್ಷಕ್ಕೆ ಒಂದು ಸಾಲ ಮನ್ನಾ ಮಾಡಿದ್ದು ಹೇಳ್ತಾರೆ ಎಂದು ಟೀಕಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರತಿ ರೈತರಿಗೆ 10 ಸಾವಿರ ಹಣ ತಲುಪಿದೆ. ಹಾಗಾದರೆ ಸಾಲ ಮನ್ನಾ ಪ್ರತಿ ರೈತರಿಗೆ ತಲುಪಿದ್ಯಾ? ಬಿಜೆಪಿ ಸರ್ಕಾರದಲ್ಲಿ ರೈತರಿಗೆ ಹೆಚ್ಚು ಯೋಜನೆ ಸಿಕ್ಕಿದೆ, ರೈತ ವಿದ್ಯಾ ನಿಧಿ ಜೆಡಿಎಸ್ ನಮ್ದು ಅಂತ ಹೇಳೋಕೆ ಆಗುತ್ತಾ? ನಾವು ನಮ್ಮ ಸಾಧನೆಯನ್ನು ಎಲ್ಲರಿಗೂ ಹೇಳೋಕೆ ಆಗಿಲ್ಲ, ಇದರಲ್ಲಿ ವಿಫಲರಾಗಿದ್ದೇವೆ ಅನ್ನೋದನ್ನು ಒಪ್ಪಿಕೊಳ್ಳುತ್ತೇವೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಜೆಡಿಎಸ್ ಜೊತೆಗೆ ಎಂಬ ಹಣೆಪಟ್ಟಿಯಿಂದ ನಷ್ಟ ಅನುಭವಿಸಿದ್ದೇವೆ. ನಮಗೆ ರಾಜಕೀಯವಾಗಿ ಜೆಡಿಎಸ್ ಜೊತೆಗೆ ಯಾವುದೇ ಸಂಬಂಧ ಇಲ್ಲ, ಜೆಡಿಎಸ್ ಕೂಡ ಅದನ್ನೇ ಹೇಳಿದೆ. ಜೆಡಿಎಸ್ ಅವರ ರಿಪೋರ್ಟ್ ಕಾರ್ಡ್ ಅವರು ಕೊಡಲಿ, ನಮ್ಮ ರಿಪೋರ್ಟ್ ಕಾರ್ಡ್ಅನ್ನು ನಾವು ಜನರ ಮುಂದೆ ಇಡುತ್ತೇವೆ ಎಂದರು.
ದಿನಕ್ಕೊಂದು ವೇಷ ಹಾಕುವ ವ್ಯಕ್ತಿ ನಾನಲ್ಲ:ನಾವು ಸಂವಿಧಾನ ಬದ್ಧವಾಗಿ ಮೀಸಲಾತಿ ಕೊಡುವ ಕೆಲಸ ಮಾಡಿದ್ದೇವೆ. ಆದರೆ ಕಾಂಗ್ರೆಸ್ ನವರಿಗೆ ಇದನ್ನು ಅರಗಿಸಿಕೊಳ್ಲೋಕೆ ಆಗುತ್ತಿಲ್ಲ. ಮೀಸಲಾತಿ ಹೆಸರಿನ ಮೂಲಕ ಬಿಜೆಪಿ ಸರ್ಕಾರ ಅಸ್ಥಿರಗೊಳಿಸುವ ಕೆಲಸ ಮಾಡಿದರು. ಒಬಿಸಿ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗದ ರೀತಿಯ, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದೇವೆ. ಕಾನೂನು ಬದ್ಧವಾಗಿ ಮಾಡಿರೋ ಕ್ರಮದ ಬಗ್ಗೆ ವಿವರವನ್ನು ಆದಷ್ಟು ಬೇಗ ಕೊಡುತ್ತೇವೆ. ಆದರೆ ಡಿ ಕೆ ಶಿವಕುಮಾರ್ ಅವರಿಗೆ ಒಂದು ಮಾತು ಹೇಳುತ್ತೇನೆ.. ದಿನಕ್ಕೊಂದು ವೇಷ ಹಾಕುವ ವ್ಯಕ್ತಿಗಳು ನಾವಲ್ಲ, ದಿನಕ್ಕೊಂದು ವೇಷ ಹಾಕುವ ಪಾರ್ಟಿಯೂ ನಮ್ಮದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ತಿರುಗೇಟು ಕೊಟ್ಟರು.
ಹರಿಪ್ರಸಾದ್ ವಿರುದ್ಧ ಸಿ ಟಿ ರವಿ ವಾಗ್ದಾಳಿ:ಅವರ ಯೋಗ್ಯತೆಗೆ ಒಂದು ಪಂಚಾಯತಿ ಚುನಾವಣೆ ಗೆಲ್ಲೋದಕ್ಕೆ ಆಗ್ಲಿಲ್ಲ. ನಾನು ನಾಲ್ಕು ಬಾರಿ ಚುನಾವಣೆ ಗೆದ್ದಿದ್ದೇನೆ. ಇವರು ಬಂದಾಗೆ ನಾನು ರಾಜಕೀಯಕ್ಕೆ ಬಂದಿಲ್ಲ, ನಾಲಿಗೆ ಬಿಗಿ ಹಿಡಿದು ಮಾತಾಡಿ ಎಂದು ಗುಡುಗಿದರು. ಹರಿಪ್ರಸಾದ್ ದೆಹಲಿಯಲ್ಲಿ ರಾಜಕೀಯ ಮಾಡಿದವರು. ಅವರ ನಾಯಕನನ್ನು ನೋಡಿ ಅವರು ನನಗೆ ಹೇಳಿದ್ದಾರೆ.
ನಾನು ಹೋರಾಟ ಮಾಡಿ ಈ ಸ್ಥಾನಕ್ಕೆ ಬಂದಿದ್ದೇನೆ. ಕಳೆದ 30 ವರ್ಷಗಳಿಂದ ಒಂದೇ ದೇಹ ತೂಕ ಹೊಂದಿದ್ದೇನೆ. ನಾನು ಮದ್ಯ ಕುಡಿಯುವುದೇ ಆಗಿದ್ದರೆ ಬಿಕೆ ಹರಿಪ್ರಸಾದ್ ತರ ಇರ್ತಾ ಇದ್ದೆ. ನನಗೆ ಮೂವತ್ತು ವರ್ಷದ ಹಿಂದಿನ ಪ್ಯಾಂಟ್ ಈಗಲೂ ಆಗುತ್ತದೆ. ನನ್ನ ದಿನಚರಿ ಆರಂಭ ಆಗೋದೆ ಯೋಗದ ಮೂಲಕ. ಇವರ ತರ ದಿನಚರಿ ಆರಂಭ ಮಾಡೋನಲ್ಲ ನಾನು. ಬಿ ಕೆ ಹರಿಪ್ರಸಾದ್ ಹೇಳುವ ಎಲ್ಲಾ ಮಾತುಗಳು ಅವರ ನಾಯಕನಿಗೆ ಅನ್ವಯಿಸುತ್ತದೆಯೇ ವಿನಃ ನನಗಲ್ಲ. ಮಾತಾಡುವಾಗ ಹುಷಾರ್ ಎಂದು ಬಿ ಕೆ ಹರಿಪ್ರಸಾದ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯಗೆ ಟಾಂಗ್ :ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸೋಲಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾವು ನಕಾರಾತ್ಮಕವಾಗಿ, ವೈಯಕ್ತಿವಾಗಿ ಯಾರನ್ನೂ ಸೋಲಿಸೋಕೆ ಹೋಗಲ್ಲ. ಆದರೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸೋಕೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ನಮ್ಮ ಪಕ್ಷದ ಅಭ್ಯರ್ಥಿಗಳ ವಿರುದ್ದ ಯಾವುದೇ ಪಕ್ಷದ ಎದುರಾಳಿಯಾಗಿರಲಿ ಅವರನ್ನು ಎದುರಿಸಲು ಬೇಕಾದ ಕೆಲಸ ಮಾಡುತ್ತೇನೆ. ಆದರೆ ವೈಯಕ್ತಿವಾಗಿ ಸೋಲಿಸುವ ಪ್ರಯತ್ನದ ಬಗ್ಗೆ ಪರಮೇಶ್ವರ್ರನ್ನು ಕೇಳಿ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಚುನಾವಣೆಗೆ ಮೊದಲೇ ಕ್ಲಿಯರ್ ಮಾಡಿದ್ದೇವೆ:ಪ್ರಧಾನಿ ಅವರೇ ನಮ್ಮನ್ನು ರಾಜೀನಾಮೆ ಕೊಡಲು ಹೇಳಿದ್ದರು. ಇಂದು ನಮ್ಮನ್ನು ಬ್ಲಾಕ್ ಮೇಲ್ ಪಾರ್ಟಿ ಎಂದು ಬಿಜೆಪಿ ಹೇಳುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ಚುನಾವಣೆ ಪೂರ್ವದಲ್ಲಿ ಜೆಡಿಎಸ್, ಬಿಜೆಪಿ ಎರಡು ಒಂದೆನೇ ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಂತ ಹೇಳುತ್ತಿದ್ದರು. ಈ ರೀತಿಯ ತಪ್ಪು ಸಂದೇಶ ಹೋಗಬಾರದು ಅಂತ ಚುನಾವಣೆ ಮೊದಲೇ ನಮಗೆ ಬೀ ಟೀಮ್ ಇಲ್ಲ ಅಂತ ಕ್ಲೀಯರ್ ಮಾಡುತ್ತಿದ್ದೇವೆ. ಇದರಲ್ಲಿ ಮುಜುಗರ ಪಡುವಂತಹದ್ದು ಯಾವುದೂ ಇಲ್ಲ, ಪಾರ್ಟಿ ಚುನಾವಣೆ ಮೊದಲೇ ಸ್ಪಷ್ಟಪಡಿಸಿದೆ. ಪ್ರಧಾನಿಗಳು ಸಾರ್ವಜನಿಕವಾಗಿ ಕುಮಾರಸ್ವಾಮಿ ರಾಜೀನಾಮೆಗೆ ಹೇಳಿದ್ರಾ? ಈ ಸಂದರ್ಭದಲ್ಲಿ ಪ್ರಧಾನಿ ಅವರನ್ನು ಈ ಬಗ್ಗೆ ಕೇಳೋಕೆ ಆಗುತ್ತಾ? ಎಂದು ಹೆಚ್ಡಿಕೆಗೆ ಟಾಂಗ್ ನೀಡಿದರು.
ಡಿವೈಎಸ್ಪಿ ಗಣಪತಿ ಕೇಸ್ ನಲ್ಲಿ ಏನಾಗಿತ್ತು?:ಸಿಎಂ ಕ್ರಿಮಿನಲ್ ರಕ್ಷಣೆ ಮಾಡ್ತಾರೆ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ ಸಾಯುವ ಮುನ್ನ ಡಿವೈಎಸ್ ಪಿ ಗಣಪತಿ ಲೈವ್ ಓಪನ್ ಸ್ಟೇಟ್ ಮೆಂಟ್ ಕೊಟ್ಟಿದ್ದರು. ಡಿ ಕೆ ರವಿ ಪ್ರಕರಣದಲ್ಲಿ ಕುಮಾರಸ್ವಾಮಿ ಧರಣಿ ಮಾಡಿದ್ದರು. ನಮ್ಮ ಸರ್ಕಾರ ಬಂದ ತಕ್ಷಣ ಫೈಲ್ ರಿ ಓಪನ್ ಮಾಡ್ತೀವಿ, ಡಿ ಕೆ ರವಿ ಕೇಸ್ ನಲ್ಲಿ ಭಾಗಿಯಾದ ಕಾಂಗ್ರೆಸ್ ಪ್ರಭಾವಿ ನಾಯಕರ ನನಗೆ ಗೊತ್ತಿದೆ ಅಂತ ಕುಮಾರಸ್ವಾಮಿ ಹೇಳಿದ್ದರು. ಆದರೆ ಮುಂದೆ ಆ ಪ್ರಭಾವಿ ನಾಯಕರೇ ಹೆಚ್ಡಿಕೆ ಕ್ಯಾಬಿನೆಟ್ ನಲ್ಲಿ ಸಚಿವರು ಆಗಿದ್ದರು ಎಂದು ಸಿ ಟಿ ರವಿ ಹೇಳಿದರು.
ಇದನ್ನೂ ಓದಿ :ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬೆಂಬಲಿಸುವಂತೆ ಅಮಿತ್ ಶಾ ಕರೆ