ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಎರಡು ದಿನಗಳ ಹಿಂದೆ ಪೊಲೀಸ್ ಸಿಬ್ಬಂದಿಗೆ ಚಾಕು ಹಾಕಿದ್ದ ದುಷ್ಕರ್ಮಿಗೆ ಖಾಕಿ ಪಡೆ ಗುಂಡಿನೇಟು ಕೊಟ್ಟಿದೆ.
ಪೊಲೀಸರಿಗೆ ಚಾಕು ಹಾಕಿದ್ದ ದುಷ್ಕರ್ಮಿಗೆ ಗುಂಡೇಟು ಕಳೆದೆರಡು ದಿನಗಳ ಹಿಂದೆ ಆರ್.ಟಿ.ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮರ್ಧಾನ್ ಖಾನ್ ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ:ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಡಾರಿಗಳು ಗಲಾಟೆ ಮಾಡುತ್ತಿದ್ದರು. ಈ ವೇಳೆ, ಠಾಣೆಯ ಹೆಡ್ ಕಾನ್ಸ್ಟೇಬಲ್ ಗಲಾಟೆ ಬೀಡಿಸಲು ಹೋದಾಗ ಮರ್ಧಾನ್ ಖಾನ್ ನಾಗರಾಜ್ ಎಂಬುವವರ ಹೊಟ್ಟೆಗೆ ಎರಡು ಬಾರಿ ಚಾಕು ಇರಿದು ಪರಾರಿಯಾಗಿದ್ದ. ಕೂಡಲೇ ನಾಗರಾಜ್ ಅವರನ್ನು ರಾಮಯ್ಯ ಆಸ್ಪತ್ರೆಗೆ ಸ್ಥಳೀಯರ ನೆರವಿನೊಂದಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ನಿನ್ನೆ ನಗರ ಆಯುಕ್ತ ಭಾಸ್ಕರ್ ರಾವ್ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು.
ಪ್ರಕರಣ ಸಂಬಂಧ ಆರೋಪಿಯ ಬೆನ್ನು ಬಿದ್ದಿದ್ದ ಪೊಲೀಸರು ನಿನ್ನೆ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಚಾಕುವನ್ನು ವಶಕ್ಕೆ ಪಡೆದಿದ್ದರು. ಈ ನಡುವೆ, ಪಂಚನಾಮೆ ಮಾಡುತ್ತಿದ್ದ ವೇಳೆ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಈತನನ್ನು ಹಿಡಿಯಲು ಹೋದಾಗ ಪೇದೆ ಶ್ರೀಧರ್ ಮೂರ್ತಿ ಹಾಗೂ ಮುತ್ತಪ್ಪ ಎಂಬುವವರಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ, ಆರ್ಟಿ ನಗರ ಇನ್ಸ್ಪೆಕ್ಟರ್ ಮಿಥುನ್ ಶಿಲ್ಪಿ ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದರು. ಇದಕ್ಕೂ ಬಗ್ಗದೇ ಆರೋಪಿ ಕಲ್ಲಿನಿಂದ ಪೊಲೀಸ್ ಗ್ಲಾಸ್ ಒಡೆದಿದ್ದಾನೆ. ಎಚ್ಚೆತ್ತ ಪೊಲೀಸ್ ಆರೋಪಿ ಮರ್ಧಾನ್ ಖಾನ್ ಕಾಲಿಗೆ ಎರಡು ಗುಂಡು ಹಾರಿಸಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿ ವಿರುದ್ಧ ಉತ್ತರ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಡಾಕಯಿತಿ, ರಾಬರಿ ಹೀಗೆ ನಾಲ್ಕು ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.