ಬೆಂಗಳೂರು: ಕಾವಲ್ ಬೈರಸಂದ್ರದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ, ವಾಹನಗಳ ಜಖಂ ಸೇರಿದಂತೆ ಕಳೆದ ರಾತ್ರಿ ನಡೆದ ಹಿಂಸಾಚಾರ ಸಂಬಂಧ ಸಂಸದೆ ಶೋಭಾ ಕರಂದ್ಲಾಜೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಲಭೆಕೋರರ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಎಸ್ಡಿಪಿಐ ಕೈವಾಡವಿದೆ. ಹೀಗಾಗಿ ರಾಜ್ಯದಲ್ಲಿ ಈ ಎರಡೂ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
SDPI, PFI ಸಂಘಟನೆಗಳನ್ನು ನಿಷೇಧಿಸಲು ಸರ್ಕಾರಕ್ಕೆ ಶೋಭಾ ಕರಂದ್ಲಾಜೆ ಒತ್ತಾಯ ಶಿವಾಜಿನಗರದಲ್ಲಿ ನಡೆದ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹಾಗೂ ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಹತ್ಯೆಗಳ ಹಿಂದೆ ಈ ಸಂಘಟನೆಗಳ ಮುಖಂಡರ ಪ್ರಚೋದನೆಯಿದೆ. ನಿನ್ನೆ ರಾತ್ರಿ ಶಾಸಕರ ಮನೆ ಸೇರಿದಂತೆ ಈ ಭಾಗದ ಹಲವಾರು ಮನೆಗಳ ಮೇಲೆ ದಾಳಿಗೂ ಇವರೇ ಕಾರಣ. ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಲಾಗಿದೆ ಎಂದರು.
ಇದೊಂದು ಪೂರ್ವ ನಿಯೋಜಿತ ಕೃತ್ಯ. ದಾಳಿ ಮಾಡಿ ಅಪಾರ ನಷ್ಟ ಉಂಟು ಮಾಡಿದವರಿಂದಲೇ ನಷ್ಟ ಹಾನಿ ವಸೂಲಿ ಮಾಡಬೇಕು. ಆಗ ಮಾತ್ರ ಇಂಥವರಿಗೆ ಭಯ ಬರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಅನುಚಿತವಾಗಿ ಪೋಸ್ಟ್ ಮಾಡಿದವರು ಯಾರು ಎಂದು ತನಿಖೆ ಆಗಬೇಕು. ಸಮುದಾಯಗಳ ನಡುವೆ ವೈಷಮ್ಯ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಷಡ್ಯಂತ್ರ ಇದು ಎಂದು ಅವರು ಹೇಳಿದರು.
ರಾಜಕೀಯ ಮತ್ತು ಎಸ್ಡಿಪಿಐಗೆ ಸಂಬಂಧವೇ ಇಲ್ಲದ ಮನೆಗಳಿಗೂ ಹಾನಿ ಮಾಡಿದ್ದಾರೆ. ತನ್ವೀರ್ ಸೇಠ್ ಮೇಲಿನ ಹಲ್ಲೆ, ಮಂಗಳೂರು ಪೊಲೀಸ್ ಸ್ಟೇಷನ್ ಮೇಲಿನ ಹಲ್ಲೆ, ಪಾದರಾಯನಪುರ ಘಟನೆಗಳ ಮುಂದುವರೆದ ಭಾಗ ಇದು. ಪೊಲೀಸ್ ಸ್ಟೇಷನ್ ಮೇಲೆ ಹಲ್ಲೆ ಮಾಡುವಷ್ಟು ಧೈರ್ಯ ಇವರಿಗೆ ಹೇಗೆ ಬಂತು? ಎಂದು ಶೋಭಾ ಪ್ರಶ್ನಿಸಿದ್ದಾರೆ.