ಬೆಂಗಳೂರು:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರ ಬೆಂಬಲವೇ ಇಲ್ಲ. ಹೈಕಮಾಂಡ್ಅನ್ನು ಬ್ಲಾಕ್ಮೇಲ್ ಮಾಡಿ ಪ್ರತಿಪಕ್ಷದ ನಾಯಕರಾಗಿದ್ದಾರೆ. ತಾಕತ್ತಿದ್ದರೆ ಶಾಸಕರಿಂದ ಗೌಪ್ಯ ಮತದಾನ ಮಾಡಿಸಿ ಆಯ್ಕೆಯಾಗಿ ನೋಡೋಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲೆಸೆದಿದ್ದಾರೆ.
ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ಸವಾಲ್... ಏನದು ಗೊತ್ತಾ? - ಮಲ್ಲೇಶ್ವರಂನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರು ಗೌಪ್ಯ ಮತದಾನದ ಮೂಲಕ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ತೋರಿಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲೆಸೆದಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ರಾಜ್ಯಾದ್ಯಂತ ಏಕಾಂಗಿಯಾಗಿ ಓಡಾಡ್ತಿದ್ದಾರೆ ಪಾಪಾ ಸಿದ್ದರಾಮಯ್ಯ. ಏಕೋಪಾಧ್ಯಯ ಶಾಲೆಯ ಮುಖ್ಯೋಪಾಧ್ಯಾಯ ಆಗಿದ್ದಾರೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದಂತೆ ಕಾಂಗ್ರೆಸ್ ಪತನಕ್ಕೂ ಸಿದ್ದರಾಮಯ್ಯ ಕಾರಣವಾಗಲಿದ್ದಾರೆ. ತಾವೊಬ್ಬರೇ ಹಿಂದುಳಿದ ಸಮುದಾಯದ ನಾಯಕನಂತೆ ಸಿದ್ದರಾಮಯ್ಯ ವರ್ತಿಸ್ತಿದ್ದಾರೆ. ಸಿದ್ದರಾಮಯ್ಯನವರನ್ನ ಕಾಂಗ್ರೆಸ್ಗೆ ಕರೆ ತಂದಿದ್ದೇ ಹೆಚ್.ವಿಶ್ವನಾಥ್. ಆದರೆ ವಿಶ್ವನಾಥ್ ಪಕ್ಷ ಬಿಡುವಂತೆ ಸಿದ್ದರಾಮಯ್ಯ ಮಾಡಿದರು ಎಂದು ವಾಗ್ದಾಳಿ ನಡೆಸಿದರು.
ಶ್ರೀರಾಮುಲು ಜನಪ್ರಿಯತೆ ಸಹಿಸಿಕೊಳ್ಳಲು ಆಗದೇ ಅವರನ್ನ ಟಾರ್ಗೆಟ್ ಮಾಡ್ತಿದ್ದೀರಿ. ಇದೇ ಶ್ರೀರಾಮುಲು ಅವರ ವಿರುದ್ಧ ಬಾದಾಮಿಯಲ್ಲಿ ಅತಿ ಕಡಿಮೆ ಅಂತರದಿಂದ ಸೋತಿದ್ದಾರೆ. ಶ್ರೀರಾಮುಲು ಅವರನ್ನ ಪೆದ್ದ ಅಂತಾ ಕರೆದು ಹಿಂದುಳಿದ ನಾಯಕರಿಗೆ ಅವಮಾನ ಮಾಡಿದ್ದೀರಿ. ಈ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಮುನಿಯಪ್ಪ, ಪರಮೇಶ್ವರ್, ರಾಮಲಿಂಗಾರೆಡ್ಡಿ, ಹರಿಪ್ರಸಾದ್ ಎಲ್ಲಿದ್ದಾರೆ? ಈಗಲೂ ನಿಮ್ಮ ಶಾಸಕರನ್ನೇ ಕೇಳಿದರೆ ನಿಮ್ಮನ್ನ ನಾಯಕ ಅಂತಾ ಒಪ್ಕೊಳ್ಳಲ್ಲ. ಹೈಕಮಾಂಡ್ನ್ನು ಬ್ಲಾಕ್ಮೇಲ್ ಮಾಡಿ ವಿಪಕ್ಷ ನಾಯಕರಾಗಿದ್ದೀರಿ. ನಿಮ್ಮ ಶಾಸಕರೇ ನಿಮ್ಮನ್ನು ನಾಯಕ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಇವತ್ತು ನೀವು ಕಾಂಗ್ರೆಸ್ ಶಾಸಕರನ್ನು ಸೇರಿಸಿ ಗೌಪ್ಯ ಮತದಾನ ಮಾಡಿಸಿದರೆ ನಿಮಗೆ ಮತ ಬೀಳಲ್ಲ. ಬೇಕಿದ್ದರೆ ಒಮ್ಮೆ ಶಾಸಕರಿಂದ ಗುಪ್ತ ಮತದಾನ ಮಾಡಿಸಿ ನೋಡಿ ಎಂದು ಸವಾಲೆಸೆದರು.