ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು: ಹನುಮಾನ್ ಚಾಲಿಸಾ ವಿಚಾರದಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಕಿದ ಸವಾಲನ್ನು ಸ್ವೀಕರಿಸಿ ಇಂದು ಸಂಜೆ ನಾವು ಹನುಮಾನ್ ಚಾಲೀಸಾ ಓದಲಿದ್ದು, ನಿಮಗೆ ಕಿವಿ ಇದ್ದರೆ ಬಂದು ಕೇಳಿಸಿಕೊಳ್ಳಿ ಎಂದು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಂಚಾಲಕಿ ಶೋಭಾ ಕರಂದ್ಲಾಜೆ ಪ್ರತಿ ಸವಾಲು ಎಸೆದಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ನಮಗೆ ಸವಾಲು ಹಾಕಿದ್ದಾರೆ. ಬಿಜೆಪಿ ಅವರಿಗೆ ಹನುಮಾನ್ ಚಾಲೀಸಾ ಹೇಳೋಕೆ ಬರಲ್ಲ ಎಂದು ಆಂಜನೇಯ ವಿಚಾರವಾಗಿ ಮಾಧ್ಯಮದಲ್ಲಿ ಹೇಳಿದ್ದಾರೆ. ಈ ಸವಾಲನ್ನು ನಾವು ಸ್ವೀಕಾರ ಮಾಡಿದ್ದೇವೆ. ಇಂದು ಸಂಜೆ 7 ಗಂಟೆಗೆ ಎಲ್ಲಾ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತೇವೆ. ನಾನು ಮಲ್ಲೇಶ್ವರ 8ನೇ ಕ್ರಾಸ್ ರಾಮನ ದೇವಸ್ಥಾನಕ್ಕೆ ಹೋಗುತ್ತೇನೆ. ಅವರು ಬಂದು ಕೇಳಿಸಿಕೊಳ್ತಾರಾ ನೋಡೋಣ ಎಂದು ಸವಾಲೆಸೆದರು.
ಅವರ ಹೇಳಿಕೆ ಎಷ್ಟು ಚೈಲ್ಡಿಶ್ ಆಗಿದೆ ಅಂತ ರಾಜ್ಯದ ಜನ ನೋಡಿದ್ದಾರೆ. ಇಂಡೋನೇಷ್ಯಾ ದೇಶ ಸೇರಿದಂತೆ, ನಮ್ಮ ದೇಶದ ಜನ ಆಂಜನೇಯನನ್ನು ಆರಾಧಿಸುತ್ತೇವೆ. ಆಂಜನೇಯ ಹುಟ್ಟಿದ ನಾಡು ಕರುನಾಡು. ಕಿಷ್ಕಿಂದೆಯಲ್ಲಿ ಜನಿಸಿದ್ದ ಹನುಮಂತ ಸೂರ್ಯನನ್ನೇ ನುಂಗಲು ಹೊರಟಿದ್ದನು. ವಾಲಿ, ಸುಗ್ರೀವ ಯುದ್ಧದ ಬಗ್ಗೆಯೂ ಪುರಾಣದಲ್ಲಿ ಓದಿದ್ದೇವೆ. ಇದರ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇಟ್ಟಿದ್ದಾರೆ. ಕರ್ನಾಟಕದ ಗೌರವ, ಹೆಮ್ಮೆ, ಭಕ್ತಿ ಏನಿತ್ತು. ಅದನ್ನು ಕದ್ದೊಯ್ಯುವ ಕೆಲಸ ಮಾಡಿದ್ದಾರೆ. ಆಂಜನೇಯನ ತಂದೆ ಯಾರು ಅಂತ ಸುರ್ಜೇವಾಲಗೆ ಗೊತ್ತಿಲ್ಲ. ವಾಯುಪುತ್ರ, ಅಂಜನಿಪುತ್ರ ಅಂತ ಹೇಳುತ್ತೇನೆ. ಅಂಜನಿ ಪುತ್ರ, ಪವನ ಸುತ ನಾಮ ಅಂತಲೂ ಕರೆಯುತ್ತೇವೆ. ಈ ಬಗ್ಗೆ ತುಳಸೀದಾಸರು ಉತ್ತಮವಾಗಿ ಹೇಳಿದ್ದಾರೆ. ಸುರ್ಜೇವಾಲಗೆ ಆಂಜನೇಯ ಹುಟ್ಟಿದ ಜಾಗ ಗೊತ್ತಿಲ್ಲ, ಅವರ ತಂದೆ, ತಾಯಿ ಗೊತ್ತಿಲ್ಲ. ಅವರು ನಮಗೆ ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ಸಮಯವಿದ್ರೆ ಸಂಜೆ 7 ಗಂಟೆಗೆ ಎಲ್ಲೆಡೆ ನೋಡಲಿ ಎಂದರು.
ಆಂಜನೇಯನ ಜನ್ಮದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದೀರಿ. ನೀವು ಚುನಾವಣೆಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ನಾವು ಹಿಂದೂಗಳು ಧರ್ಮ ಸಹಿಷ್ಣುಗಳು. ಸಿದ್ದರಾಮಯ್ಯ, ಡಿಕೆಶಿಗೆ ಮತ್ತೆ ಹೇಳುತ್ತೇನೆ. ಬಜರಂಗದಳ ಏನು ಮಾಡಿದೆ? ಬಜರಂಗದಳ ಯಾವ ಕುಕ್ಕರ್ ಬ್ಲಾಸ್ಟ್ ಮಾಡಿದೆ. ಯಾವ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದೆ ಎಂದು ಪ್ರಶ್ನಿಸಿದರು. ಪಿಎಫ್ಐ ಬ್ಯಾನ್ ಆದ ಬಳಿಕ ಎಲ್ಲರೂ ಎಸ್ಡಿಪಿಐ ಸೇರಿದ್ದಾರೆ. ಎಸ್ಡಿಪಿಐ ಹೇಳುತ್ತದೆ ನಾವು, ಕಾಂಗ್ರೆಸ್ ಒಂದೇ ಅಂತ. ಭಗವದ್ಗೀತೆ, ಪುರಾಣ ಓದದ ಸುರ್ಜೇವಾಲ ನಮಗೆ ಪಾಠ ಮಾಡಲು ಬಂದಿದ್ದಾರೆ. ಸಂಜೆ 7ಗಂಟೆಗೆ ನಮ್ಮ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಣ ಮಾಡುತ್ತಾರೆ. ನಿಮಗೆ ಕಿವಿ ಇದ್ರೆ ಕೇಳಿಸಿಕೊಳ್ಳಿ ಎಂದರು.
ನಮ್ಮೆಲ್ಲರ ತಾಯಿ ಬೇರು ಆರ್ಎಸ್ಎಸ್, ಬಿಜೆಪಿ ರಾಜಕೀಯ ವಿಭಾಗ, ಹಿಂದೂ ಧರ್ಮದ ವಿಚಾರದಲ್ಲಿ ಹೋರಾಟ ಮಾಡುವುದು ಬಜರಂಗದಳ, ವಿದ್ಯಾರ್ಥಿಗಳ ಜೊತೆ ಕೆಲಸ ಮಾಡೋದು ಎಬಿವಿಪಿ ಹೀಗೆ ವಿವಿಧ ವಿಭಾಗದಲ್ಲಿ ಕೆಲಸ ಮಾಡುವ ಸಂಘಟನೆಗಳಿವೆ. ಬಜರಂಗದಳ ನಮ್ಮ ಯುವಕರ ಶಕ್ತಿ. ಯುವಕರು ತಮ್ಮ ಭಾವನೆ ಇಷ್ಟಪಡುವ ಕೆಲಸವನ್ನು ಬಜರಂಗದಳ ಮಾಡುತ್ತದೆ. ಮಠ ಮಂದಿರ ದೇವಸ್ಥಾನ ಉಳಿಸಲು ಬಜರಂಗದಳ ಕೆಲಸ ಮಾಡುತ್ತದೆ. ಹಿಂದೆ ಯಾರು ಏನು ಹೇಳಿದ್ದರು ಎಂಬುದು ಗೊತ್ತಿಲ್ಲ. ಆದರೆ ಬಜರಂಗದಳ ಬಿಜೆಪಿಯ ಒಂದು ಭಾಗ ಎಂದು ಸಚಿವೆ ಕರಂದ್ಲಾಜೆ ಸಮರ್ಥಿಸಿಕೊಂಡರು.
ಬಜರಂಗದಳದ ವಿರುದ್ಧ ಕೆಲ ಕೊಲೆ, ದೊಂಬಿ, ಹಲ್ಲೆ ಆರೋಪಗಳಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ಇದನ್ನು ನಾವು ಖಂಡಿತವಾಗಿ ಸಮರ್ಥನೆ ಮಾಡಿಕೊಳ್ಳಲ್ಲ ಆದರೆ ನಮ್ಮ ಕಾರ್ಯಕರ್ತರು ಯಾರೂ ಇಂತಹ ಚಟುಚಟಿಕೆಗಳಲ್ಲಿ ಪಾಲ್ಗೊಳ್ಳಲ್ಲ, ಇದೆಲ್ಲವೂ ಸುಳ್ಳು ಆರೋಪಗಳು, ಆವತ್ತಿನ ಕಾಂಗ್ರೆಸ್‌ನವರು ಹಾಕಿರುವ ಸುಳ್ಳು ಕೇಸ್ಗಳು, ಗೋ ಕಳ್ಳಸಾಗಣೆ ಮಾಡೋರನ್ನು ಹಿಡಿಯುವ ಕೆಲಸ ಮಾಡಿದ್ದರು. ದಕ್ಷಿಣ ಕನ್ನಡ, ಉಡುಪಿಯಿಂದ ಹೆಚ್ಚು ಗೋಕಳ್ಳಸಾಗಣೆ ಆಗುತ್ತದೆ. ಅಂಥ ಸಂದರ್ಭಗಳಲ್ಲಿ ಬಜರಂಗ ದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ಕೊಡ್ತಾರೆ. ಪೊಲೀಸರು ಇದನ್ನು ತಡೆಯಲು ಹೋದಾಗ ಅವರಿಗೇ ಗುಂಡು ಹಾರಿಸಲಾಗಿದೆ. ಕಾಂಗ್ರೆಸ್‌ನವರು ಆ ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದಾರೆ. ಇದೇ ನಮಗೂ ಕಾಂಗ್ರೆಸ್ಗೂ ಇರೋ ವ್ಯತ್ಯಾಸ ಎಂದರು.
ಇದನ್ನೂ ಓದಿ:ರಾಜಕೀಯ ಲಾಭಕ್ಕಾಗಿ ಹನುಮಾನ್ ಚಾಲಿಸ್ ಪಠಣ: ಬಿಜೆಪಿಗೆ ಮನೀಶ್ ತಿವಾರಿ ತಿರುಗೇಟು