ಕರ್ನಾಟಕ

karnataka

ETV Bharat / state

ಹಳ್ಳಿಕಾರ್ ಸಮುದಾಯದ ಪ್ರವರ್ಗ 1ರ ಬೇಡಿಕೆ ಬಗ್ಗೆ ಸಿಎಂ ಜತೆ ಚರ್ಚೆ: ಸಚಿವ ಶಿವರಾಜ್ ತಂಗಡಗಿ - etv bharat karnataka

ಒಕ್ಕಲಿಗ ಸಮುದಾಯದ ಉಪ ಪಂಗಡವಾಗಿರುವ ಹಳ್ಳಿಕಾರ್ ಒಕ್ಕಲಿಗರನ್ನು ಹಿಂದುಳಿದ ವರ್ಗದ ಪ್ರವರ್ಗ 1ರ ಅಡಿ ಸೇರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ.

shivraj-thandagi-reaction-on-demand-of-category-1-for-hallikar-community
ಹಳ್ಳಿಕಾರ್ ಸಮುದಾಯದ ಪ್ರವರ್ಗ 1ರ ಬೇಡಿಕೆ ಬಗ್ಗೆ ಸಿಎಂ ಜತೆ ಚರ್ಚೆ: ಶಿವರಾಜ್ ತಂಗಡಗಿ

By

Published : Jul 9, 2023, 8:42 PM IST

ಬೆಂಗಳೂರು: ಒಕ್ಕಲಿಗ ಸಮುದಾಯದ ಉಪ ಪಂಗಡವಾಗಿರುವ ಹಳ್ಳಿಕಾರ್ ಒಕ್ಕಲಿಗರು ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸಮುದಾಯದ ಬೇಡಿಕೆಯಾಗಿರುವ ಹಿಂದುಳಿದ ವರ್ಗದ 3ಎ ಪ್ರವರ್ಗದಿಂದ ಅತಿ ಹಿಂದುಳಿದ ವರ್ಗದ ಪ್ರವರ್ಗ 1ರ ಅಡಿ ಸೇರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದರು.

ಆರ್.ಎಂ.ಆರ್. ಫೌಂಡೇಷನ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಜಯನಗರದಲ್ಲಿ ಭಾನುವಾರ ಆಯೋಜಿಸಿದ್ದ ಹಳ್ಳಿಕಾರ್ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಸಣ್ಣ ಸಮುದಾಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಕಾಳಜಿ ಹೊಂದಿದ್ದು, ಆ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸುತ್ತಿದ್ದಾರೆ. ಹಳ್ಳಿಕಾರ್ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 1ರ ಅಡಿ ಸೇರಿಸಬೇಕೆಂಬ ಸಮುದಾಯದ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ಇದನ್ನೂ ಓದಿ:'ಹಿಂದೂ' ಎಂಬುದು ಧರ್ಮವೇ ಅಲ್ಲ, 'ಲಿಂಗಾಯತ'ವನ್ನು ಸ್ವತಂತ್ರ ಧರ್ಮವೆಂದು ಪರಿಗಣಿಸಿ: ಡಾ. ಸಿದ್ದರಾಮ ಸ್ವಾಮೀಜಿ

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ರಂಗದಲ್ಲಿ ತುಂಬಾ ಹಿಂದುಳಿದಿರುವ ಸಮಾಜ ಮುಂದೆ ಬರಲು ಸೂಕ್ತ ಮೀಸಲಾತಿ ಅಗತ್ಯ. ಈಗಾಗಲೇ ಸಮುದಾಯಕ್ಕೆ ಸೇರಿದ ಕಡತ ಸರ್ಕಾರದ ಮಟ್ಟದಲ್ಲಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಹಳ್ಳಿಕಾರ್ ಸಮುದಾಯದ ಪ್ರವರ್ಗ ಬದಲಿಸುವುದರಿಂದ ಈ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಲಿದೆ ಎಂಬುದು ಸಮುದಾಯದ ಜನರ ಅಭಿಪ್ರಾಯ. ಸಮುದಾಯದ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದ್ದು ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು.

ರಾಜಕೀಯ ಪ್ರಾತಿನಿಧ್ಯ ಇಲ್ಲದಂತಹ ಸಣ್ಣ ಸಮಾಜಕ್ಕೆ ಕಳೆದ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟ ಕೀರ್ತಿ ಸಿದ್ದರಾಮಯ್ಯರಿಗೆ ಇದೆ. ದೇವರಾಜ ಅರಸು ಅವರ ಆಡಳಿತದ ಬಗ್ಗೆ ತಿಳಿದಿದ್ದೇವೆ. ಅದೇ ರೀತಿಯಲ್ಲಿ ಹೆಜ್ಜೆ ಹಾಕಿರುವವರು ಸಿದ್ದರಾಮಯ್ಯ ಎಂದು ಶ್ಲಾಘಿಸಿದರು. ಹಳ್ಳಿಕಾರ್ ಸಮಾಜ ಸಣ್ಣದಿದ್ದರೂ ದೊಡ್ಡ ಕಾರ್ಯಕ್ರಮವನ್ನು ಮಾಡುತ್ತಿರುವುದು ಸಂತಸದ ವಿಚಾರ. ಇಂತಹ ಕಾರ್ಯಕ್ರಮ ಮಾಡುವುದರಿಂದ ಸಮಾಜಕ್ಕೆ ಶಕ್ತಿ ಬರಲಿದೆ. ಒಗ್ಗಟ್ಟು ಇದ್ದಲ್ಲಿ ಮಾತ್ರ ಆ ಸಮುದಾಯಗಳು ಬೆಳೆಯಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಹಳ್ಳಿಕಾರ್ ತಳಿಯ ಜಾನುವಾರುಗಳನ್ನು ಸಮಾಜಕ್ಕೆ ಕೊಟ್ಟ ಕೀರ್ತಿ ಹಳ್ಳಿಕಾರ್ ಸಮಾಜದ್ದು. ಮುಂದಿನ ದಿನಗಳಲ್ಲಿ ಈ ಸಮುದಾಯದ ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಪಡೆಯಲಿ. ರಾಜಕೀಯವಾಗಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಎಚ್.ಎಂ. ರೇವಣ್ಣ, ವಿಧಾನಪರಿಷತ್ ಸದಸ್ಯ ಯು. ಬಿ. ವೆಂಕಟೇಶ್, ಮಾಜಿ ಶಾಸಕ ಕೆ. ಚಂದ್ರಶೇಖರ್, ಮಾಜಿ ಪರಿಷತ್ ಸದಸ್ಯ ಪಿ.ಆರ್. ರಮೇಶ್, ಆರ್‌ಎಂಆರ್ ಫೌಂಡೇಶನ್ ಅಧ್ಯಕ್ಷ ಕೆ. ಎಂ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು

ಇದನ್ನೂ ಓದಿ:ಜೈನ ಮುನಿಗಳಿಗೆ ರಕ್ಷಣೆ ಸಿಗುವವರೆಗೂ ಉಪವಾಸ ಬಿಡುವುದಿಲ್ಲ : ಗುಣಧರನಂದ ಮಹಾರಾಜ್​

ABOUT THE AUTHOR

...view details