ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ರಾಜಕಾರಣಿಗಳು ಶಿವರಾತ್ರಿ ಹಬ್ಬದಂದು ಮಹಾದೇವನ ಮೊರೆ ಹೋಗಿದ್ದಾರೆ. ಭಕ್ತಿಯಿಂದ ಶಿವಪೂಜೆ ನೆರವೇರಿಸಿದ್ದು, ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯ ಕೋರಿದರು. ರಾಜ್ಯ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಶಿವರಾತ್ರಿ ಹಬ್ಬ ಆಚರಿಸಿದ್ದಾರೆ.
ಅಧಿವೇಶನ, ಪಕ್ಷದ ಕಾರ್ಯಕ್ರಮಗಳ ಬಿಡುವಿಲ್ಲದ ರಾಜಕೀಯ ಒತ್ತಡದ ನಡುವೆ ಹಬ್ಬದ ದಿನ ರಾಜಕೀಯ ಜಂಜಾಟಕ್ಕೆ ವಿರಾಮ ನೀಡಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ಕುಮಾರಕೃಪಾದಲ್ಲಿರುವ ಅಧಿಕೃತ ನಿವಾಸ ಕಾವೇರಿಯಲ್ಲಿ ಶಿವಪೂಜೆ ನೆರವೇರಿಸಿದ ಮಾಜಿ ಸಿಎಂ ಬಿಎಸ್ವೈ ಭಕ್ತಿಯಿಂದ ಶಿವನ ಆರಾಧನೆ ಮಾಡಿದರು. ನಂತರ ನಾಡಿನ ಜನತೆಗೆ ಶಿವನು ಸಕಲ ಸನ್ಮಂಗಳ ಉಂಟಾಗಲಿ ಎಂದು ಪ್ರಾರ್ಥಿಸಿ ಶುಭಾಶಯ ತಿಳಿಸಿದರು.
ಮಲ್ಲೇಶ್ವರದಲ್ಲಿ ಶಿವಾಜಿ ಜಯಂತಿ:"ನಾಡಿನ ಹಾಗೂ ನಮ್ಮ ಸಂಸ್ಕೃತಿ- ಪರಂಪರೆಯ ರಕ್ಷಣೆಗೆ ಶಿವಾಜಿ ಮಹಾರಾಜರು ಹೋರಾಡಿದ ರೀತಿಯು ಯಾವತ್ತಿಗೂ ಪ್ರೇರಕ ಶಕ್ತಿ ಆಗಿರುತ್ತದೆ" ಎಂದು ಸಚಿವ ಮತ್ತು ಮಲ್ಲೇಶ್ವರ ಶಾಸಕ ಡಾ. ಸಿ.ಎನ್ ಅಶ್ವತ್ಥನಾರಾಯಣ್ ಹೇಳಿದರು. ಸದಾಶಿವನಗರ ಭಾಷ್ಯಂ ವೃತ್ತದಲ್ಲಿ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 396 ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದನ್ನೂ ಓದಿ:ಸೋಮನಾಥ ದೇಗುಲಕ್ಕೆ ಪುತ್ರನೊಂದಿಗೆ ಭೇಟಿ ನೀಡಿದ ಮುಖೇಶ್ ಅಂಬಾನಿ; ₹1.5 ಕೋಟಿ ದೇಣಿಗೆ ಅರ್ಪಣೆ
ಚಿಕ್ಕವಯಸ್ಸಿನಲ್ಲಿಯೇ ತಾಯಿ ಜೀಜಾಬಾಯಿಯಿಂದ ಸಂಸ್ಕಾರ, ದೇಶಭಕ್ತಿಗಳನ್ನು ಮೈಗೂಡಿಸಿಕೊಂಡ ಶಿವಾಜಿ ಮಹಾರಾಜರು, ಹಿಂದೂ ರಾಷ್ಟ್ರದ ರಕ್ಷಣೆಗಾಗಿ ಸಲ್ಲಿಸಿದ ಸೇವೆ ವಿಶೇಷವಾದುದು. ಶಿವಾಜಿ ಅವರ ಗೌರವಾರ್ಥ ಕರ್ನಾಟಕ ಸರ್ಕಾರವು ಅವರ ಜಯಂತಿಯನ್ನು ಅಧಿಕೃತವಾಗಿ ರಾಜ್ಯದೆಲ್ಲೆಡೆ ಆಚರಿಸುತ್ತಿದೆ. ಜೊತೆಗೆ ರಾಜ್ಯದಲ್ಲಿರುವ ಮರಾಠ ಜನರ ಹಿತರಕ್ಷಣೆಗಾಗಿ 'ಮರಾಠ ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸಿದೆ. ಮಹಾರಾಷ್ಟ್ರದ ಹೊರತಾಗಿ ಇಂತಹ ಅಭಿವೃದ್ಧಿ ನಿಗಮ ದೇಶದ ಬೇರೆ ಯಾವ ರಾಜ್ಯದಲ್ಲೂ ಇಲ್ಲ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ, ಕರ್ನಾಟಕ ಮರಾಠ ವೆಲ್ಫೇರ್ ಸಂಘಟನೆ ಅಧ್ಯಕ್ಷ ಮನೋಜ್, ಬಿಜೆಪಿ ಒಬಿಸಿ ಘಟಕ ಅಧ್ಯಕ್ಷ ನೆ.ಲ ನರೇಂದ್ರ ಬಾಬು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ, ಗಾಯಕ್ ವಾಡ್, ಪಾಲಿಕೆ ಮಾಜಿ ಸದಸ್ಯರಾದ ಸುಮಂಗಲಾ ಕೇಶವ್, ಗಣೀಶ್, ಚಲನಚಿತ್ರ ನಟ ಕೇಸರ್ಕರ್ ಗಣೇಶ್ ಮತ್ತಿತರರು ಇದ್ದರು.
ಪ್ರಧಾನಿ ಮೋದಿಯಿಂದ ಶಿವಾಜಿಗೆ ನಮನ: ಇಂದು ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನ. ಅವರ ಹುಟ್ಟುಹಬ್ಬದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಗೌರವ ನಮನ ಸಲ್ಲಿಸಿದ್ದಾರೆ. ಶಿವಾಜಿ ಮಹಾರಾಜರ ಧೈರ್ಯ ಮತ್ತು ಆಡಳಿತ ನಮಗೆ ಸ್ಪೂರ್ತಿ ಎಂದು ಮೋದಿ ಹೇಳಿದ್ದಾರೆ. ಶಿವಾಜಿ ಜಯಂತಿಯನ್ನು 1870ರಲ್ಲಿ ಮೊಟ್ಟ ಮೊದಲ ಬಾರಿಗೆ ಆಚರಿಸಲಾಯಿತು. ಇಂದು ದೇಶದ ವಿವಿಧ ಕಡೆಗಳಲ್ಲಿ ಭಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಇದನ್ನೂ ಓದಿ:ಮೋದಿ, ಅಮಿತ್ ಶಾ ಬೆನ್ನಲ್ಲೇ ಜೆ.ಪಿ ನಡ್ಡಾ ರಾಜ್ಯ ಪ್ರವಾಸ: 2 ದಿನ ಬಿರುಸಿನ ಪ್ರಚಾರ