ಬೆಂಗಳೂರು:ರಾಜ್ಯದ ಕಾರ್ಮಿಕ ವರ್ಗಕ್ಕೆ ಸರ್ಕಾರ ಭರ್ಜರಿ ಉಡುಗೊರೆ ನೀಡಿದ್ದು, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಲಾಖೆ ಕಲ್ಯಾಣ ಯೋಜನೆಗಳಡಿ ನೀಡಲಾಗುವ ಧನ ಸಹಾಯದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ.
ಕರ್ನಾಟಕ ಕಾರ್ಮಿಕ ಮಂಡಳಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಂ ಹೆಬ್ಬಾರ್ ಅವರ ನೇತೃತ್ವದಲ್ಲಿ ನಡೆದ 90ನೇ ಸಭೆಯ ನಿರ್ಣಯಗಳನ್ನು ಇಲಾಖೆ ಜಾರಿ ಮಾಡಿದ್ದು, ಈ ಮೂಲಕ ಸಹಾಯಧನದಲ್ಲಿ ಭಾರಿ ಪ್ರಮಾಣದ ಏರಿಕೆ ಮಾಡಿ ಆದೇಶಿಸಿದ್ದು, ಈ ಮೂಲಕ ಹೆಚ್ಚಿನ ಕಾರ್ಮಿಕರಿಗೆ ಸವಲತ್ತು ದೊರಕುವಂತೆ ಮಾಡಲಾಗಿದೆ.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಜಾರಿ ಮಾಡುತ್ತಿರುವ ಈ ಕಲ್ಯಾಣ ಯೋಜನೆಗಳು ಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗದವರಿಗೆ ಲಭ್ಯವಿದ್ದು, ಈ ಸಹಾಯಧನ ಏರಿಕೆ ನಿರ್ಣಯದಿಂದ ಹೆಚ್ಚಿನ ಅನುಕೂಲ ಆಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದರು.
ಈ ಆದೇಶದಂತೆ ಕಾರ್ಮಿಕ ಕಲ್ಯಾಣ ಮಂಡಳಿ ಸಹಾಯಧನ ಮತ್ತು ಹೆರಿಗೆ ಭತ್ಯೆ ದರಗಳನ್ನು ಪರಿಷ್ಕರಿಸಲಾಗಿದೆ. ಪ್ರಸ್ತುತ ಜಾರಿಯಲ್ಲಿ ಇರುವ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ ಪಡೆಯಲು ಇದ್ದ ವೇತನ ಮಿತಿ 15,000 ರೂ. ನಿಂದ 21,000 ರೂ. ಏರಿಕೆ ಮಾಡಲಾಗಿದೆ. ಇದರಿಂದ ಈ ಯೋಜನೆ ಇನ್ನಷ್ಟು ಕಾರ್ಮಿಕರನ್ನು ತಲುಪಲಿದೆ.
ಈಗಿರುವ ಕಾರ್ಮಿಕ ವೈದ್ಯಕೀಯ ನೆರವು ಮೊತ್ತವನ್ನು 10,000 ರೂ. ನಿಂದ 25,000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಕಾರ್ಮಿಕರ ಅಪಘಾತ ಧನ ಸಹಾಯವನ್ನು 3,000 ರೂ. ನಿಂದ 10000 ರೂ.ಗೆ ಏರಿಕೆ ಮಾಡಲಾಗಿದೆ.
ಶೈಕ್ಷಣಿಕ ಪ್ರೋತ್ಸಾಹ ಯೋಜನೆಯಡಿ ಇಲಾಖೆಯು 8ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ, ಡಿಪ್ಲೋಮಾ ಐಟಿಐ ಕೋರ್ಸ್ಗೆ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ಗಳಿಗೆ ಮಾಸಿಕ ಆದಾಯ ಮಿತಿಯನ್ನು ಏರಿಕೆ ಮಾಡಿ ಹೆಚ್ಚಿನ ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗಿದೆ.