ನೆಲಮಂಗಲ (ಬೆಂಗಳೂರು):ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ನಿವಾಸಕ್ಕೆ ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಹಿರಿಯ ನಟ ಶಿವರಾಜ್ಕುಮಾರ್ ಭೇಟಿ ನೀಡಿದ್ದರು. ಶಿವಣ್ಣನ ಜೊತೆ ಪತ್ನಿ ಗೀತಾ ಕೂಡ ಇದ್ದರು. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಗೆ ಭೇಟಿ ನೀಡಿದ್ದ ಗಣ್ಯರು ಲೀಲಾವತಿಯವರ ಆರೋಗ್ಯ ವಿಚಾರಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ನಟ ಶಿವರಾಜ್ಕುಮಾರ್, ನಮ್ಮ ದನಿ ಕಂಡು ಹಿಡಿಯುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಅವರನ್ನು ನೋಡಿದ್ದೇನೆ. ಅಂದಿನಿಂದಲೂ ಅದೇ ಅತ್ಮೀಯತೆ, ಒಂದೊಳ್ಳೆ ಮನಸ್ಸಿರುವ ವ್ಯಕ್ತಿತ್ವ. ಈ ಗುಣದಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ವಿನೋದ್ ಅವರನ್ನು ನೋಡಿದಾಗಲೆಲ್ಲಾ ಅವರನ್ನೇ ನೋಡಿದಂತಾಗುತ್ತದೆ. ದೇವರ ಅಶೀರ್ವಾದ ಮತ್ತು ಜನರ ಪ್ರೀತಿ ಅವರೊಂದಿಗೆ ಇದೆ ಎಂದು ತಿಳಿಸಿದರು.
ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ:ಸೋಲದೇವನಹಳ್ಳಿಯಲ್ಲಿ ಹಿರಿಯ ನಟಿ ಡಾ. ಲೀಲಾವತಿಯವರಿಂದ ನಿರ್ಮಾಣ ಮಾಡಲಾಗಿರುವ ಪಶು ವೈದ್ಯಕೀಯ ಆಸ್ಪತ್ರೆಯನ್ನು ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು.
ಕಾರ್ಯಕ್ರಮದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಡಿಸಿಎಂ, ವಿನೋದ್ ರಾಜ್ ಅವರು 10 ದಿನಗಳ ಹಿಂದೆ ನನ್ನ ನಿವಾಸಕ್ಕೆ ಆಗಮಿಸಿ ತಾವು ಕಟ್ಟಿರುವ ಪಶು ವೈದ್ಯಕೀಯ ಆಸ್ಪತ್ರೆಯನ್ನು ಉದ್ಘಾಟಿಸಬೇಕೆಂದು ಕೇಳಿಕೊಂಡಿದ್ದರು. ಆದರೆ ಚುನಾವಣಾ ಪ್ರಚಾರದಲ್ಲಿದ್ದ ಕಾರಣಕ್ಕೆ ಕಳೆದ ಭಾನುವಾರ ಉದ್ಘಾಟನೆ ಮಾಡಲು ಸಾಧ್ಯವಾಗಿಲ್ಲ. ಲೀಲಾವತಿ ಅಮ್ಮನವರು ನಾನು ಜೀವಂತವಾಗಿರುವಾಗಲೇ ಪಶು ವೈದ್ಯಕೀಯ ಆಸ್ಪತ್ರೆಯನ್ನು ಉದ್ಘಾಟಿಸುವಂತೆ ಕೇಳಿಕೊಂಡಿದ್ದರು. ಅದರಂತೆ ನನ್ನ ಸರ್ಕಾರಿ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಇಂದು ಅವರನ್ನು ಭೇಟಿ ಮಾಡಿ ಮಾತನಾಡಿಸಿದೆ. ಶುಭವಾಗಲಿ ಎಂದು ಹಾರೈಸಿದರು. ಅವರ ಆಸೆಯಂತೆ ಇಂದು ಆಸ್ಪತ್ರೆಯನ್ನು ಉದ್ಘಾಟಿಸಿದ್ದೇನೆ ಎಂದು ತಿಳಿಸಿದರು.