ಬೆಂಗಳೂರು: ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿಯನ್ನು ಸರ್ಕಾರ ಸ್ವೀಕಾರ ಮಾಡಲಿದ್ದು, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಶಾಸಕರ ಭವನದಲ್ಲಿ ಗುರುವಾರ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರದಿ ಸ್ವೀಕಾರ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ವರದಿ ಸಲ್ಲಿಕೆಯಾಗಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆದು, ಆ ಬಳಿಕ ನಿರ್ಧಾರ ಮಾಡಲಾಗುವುದು. ವರದಿಯಲ್ಲೇನಿದೆ ಎಂದು ಯಾರಿಗೂ ಗೊತ್ತಿಲ್ಲ. ವರದಿ ಬಗ್ಗೆ ಮೊದಲೇ ಕಲ್ಪನೆ ಮಾಡಿಕೊಳ್ಳುವುದು ಬೇಡ ಎಂದರು.
ಕೋಟ್ಯಂತರ ರೂಪಾಯಿ ವೆಚ್ಚ ಮಾಡಿಸಿ ಸಮೀಕ್ಷೆ ಮಾಡಿಸಿರುವ ವರದಿಯನ್ನು ಸ್ವೀಕಾರ ಮಾಡಲ್ಲ ಎನ್ನಲು ಸಾಧ್ಯವೇ?, ಸರ್ಕಾರದಲ್ಲಿ ಸ್ವೀಕಾರ ಮಾಡಲಾಗಿರುವ ಇತರೆ ಹತ್ತಾರು ವರದಿಗಳಿವೆ. ಯಾವುದೇ ವರದಿಯನ್ನು ಸರ್ಕಾರ ಸ್ವೀಕಾರ ಮಾಡಲಿದೆ. ಆ ಬಗ್ಗೆ ಚರ್ಚೆ ನಡೆದು ನಿರ್ಧಾರ ಆಗಲಿದೆ. ವರದಿ ಸ್ವೀಕಾರವಾಗದೆ ಕಾಂತರಾಜು ವರದಿ ಬಗ್ಗೆ ವಿರೋಧ ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಹಾಲಿ, ಮಾಜಿ ಶಾಸಕರನ್ನು ಟೈಮ್ ಬಂದಾಗ ವಿದೇಶಕ್ಕೆ ಕರೆದುಕೊಂಡು ಹೋಗೋಣ : ಸತೀಶ್ ಜಾರಕಿಹೊಳಿ