ಬೆಂಗಳೂರು:ಶಾಸಕರಿಗೆ ರಕ್ಷಣೆ ಇಲ್ಲವೆಂದರೆ, ಇನ್ನು ಸಾಮಾನ್ಯ ಜನರಿಗೆ ರಕ್ಷಣೆ ಎಲ್ಲಿ ಸಿಗಲಿದೆ? ಅಖಂಡ ಶ್ರೀನಿವಾಸಮೂರ್ತಿ ಮೇಲಿನ ದಾಳಿ ವಿಚಾರದಲ್ಲಿ ಸರ್ಕಾರದಿಂದಲ್ಲೂ ತಪ್ಪಾಗಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ತಂಗಡಗಿ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಖಂಡ ಶ್ರೀನಿವಾಸಮೂರ್ತಿ ಮನೆಯ ಮೇಲಿನ ದಾಳಿ ಹಿಂದೆ ಸರ್ಕಾರದ ವೈಫಲ್ಯವೂ ಸಾಕಷ್ಟಿದೆ. ಸರ್ಕಾರದಿಂದಲೂ ತಪ್ಪಾಗಿದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ನವೀನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಒಂದೂವರೆ ಗಂಟೆಯಲ್ಲಿ 2 ಸಾವಿರ ಮಂದಿ ಸೇರುತ್ತಾರೆ. ಇವರನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎನ್ನುವುದು ಬೇಸರ ತರಿಸಿದೆ ಎಂದಿದ್ದಾರೆ.
ಅಖಂಡ ಶ್ರೀನಿವಾಸಮೂರ್ತಿ ನಮ್ಮ ಸಮುದಾಯದ ಮುಖಂಡರು. ದಾಳಿ ನಿಜಕ್ಕೂ ಬೇಸರವಾಗಿದೆ. ಸರ್ಕಾರ ತಕ್ಷಣ ನವೀನ್ ಹಾಗೂ ಈ ಗಲಭೆಗೆ ಕಾರಣರಾದ ಎಲ್ಲರನ್ನೂ ಬಂಧಿಸಿ, ತನಿಖೆ ನಡೆಸಿ, ಯಾರಿಂದ ತಪ್ಪಾಗಿದೆ, ಎಲ್ಲಿ ತಪ್ಪಾಗಿದೆ ಎಂಬುದನ್ನು ಜನರಿಗೆ ವಾಸ್ತವ ಸತ್ಯ ತಿಳಿಸುವ ಕಾರ್ಯ ಮಾಡಬೇಕು. ಇದನ್ನು ರಾಜಕೀಯ ಮಾಡುವುದು, ಕಾಂಗ್ರೆಸ್ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನುವುದು ಬೇಡ. ಇಲ್ಲಿ ನಮ್ಮ ಸಮುದಾಯದ ಒತ್ತಾಯ ಒಂದೇ. ತಪ್ಪಿತಸ್ತರನ್ನು ಪತ್ತೆ ಮಾಡಬೇಕು, ನಮ್ಮ ನಾಯಕರಿಗೆ ಆದ ಅನ್ಯಾಯಕ್ಕೆ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು.
ಸರ್ಕಾರ ತಕ್ಷಣ ತನಿಖೆ ನಡೆಸಿ ವಾಸ್ತವ ಸತ್ಯವನ್ನು ತಿಳಿಸದಿದ್ದರೆ, ವಿಳಂಬ ಮಾಡಿದರೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಮ್ಮ ಯುವಕರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಕಾರ್ಯ ಮಾಡುತ್ತಾರೆ ಎಂದು ಎಚ್ಚರಿಸಿದ್ದಾರೆ.