ಬೆಂಗಳೂರು : ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭೆ ಕ್ಷೇತ್ರದ ಪ್ರಭಾವಿ ಮುಖಂಡ ಹಾಗೂ ನಿವೃತ್ತ ಯೋಧ ಶಿವಾನಂದ ಪಾಟೀಲ್ ಅವರು ತಮ್ಮ ನೂರಾರು ಬೆಂಬಲಿಗರ ಜತೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶಿವಾನಂದ ಪಾಟೀಲ್ ಅವರಿಗೆ ಪಕ್ಷದ ಶಾಲು ಹೊದಿಸಿ ಪಕ್ಷದ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಅವರ ಜೊತೆಯಲ್ಲಿ ಆ ಕ್ಷೇತ್ರದ ನೂರಾರು ಕಾರ್ಯಕರ್ತರು ಕೂಡ ಪಕ್ಷಕ್ಕೆ ಸೇರ್ಪಡೆಯಾದರು.
ನಂತರ ಮಾತನಾಡಿದ ಕುಮಾರಸ್ವಾಮಿ ಅವರು, ಸಿಂದಗಿ ಕ್ಷೇತ್ರ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ನಡುವೆ ಕರುಳಬಳ್ಳಿ ಸಂಬಂಧ ಇದೆ. ದೇವೇಗೌಡರ ಕಾಲದಿಂದ ಸಿಂದಗಿ ಕ್ಷೇತ್ರವನ್ನು ಅತ್ಯುತ್ತಮವಾಗಿ ಪ್ರಗತಿ ಮಾಡಲಾಗಿದೆ. ಗುಳೆ ಹೋಗುತ್ತಿದ್ದ ಅಲ್ಲಿನ ಜನರು ಪಕ್ಕದ ರಾಜ್ಯಗಳಲ್ಲಿ ಕೂಲಿಗಳು ಆಗುವುದನ್ನು ತಪ್ಪಿಸಲು, ಶಾಶ್ವತವಾಗಿ ನೀರಾವರಿ ಪರಿಹಾರ ಒದಗಿಸಿದ್ದವರು ಗೌಡರು ಎಂದರು.
ಮಾಜಿ ಸಚಿವ ದಿವಂಗತ ಮನಗೂಳಿ ಮತ್ತು ಗೌಡರ ನಡುವಿನ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ತಮ್ಮ ಮಗನಂತೆ ಅವರನ್ನು ಗೌಡರು ಸಲುಹಿದ್ದರು. ಅವರ ನಿಧನದ ನಂತರ ನಡೆದ ಉಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದ್ದು ನಿಜ. ಈಗ ಅದೆನ್ನೆಲ್ಲ ಸರಿ ಮಾಡುವ ಕಾಲ ಬಂದಿದೆ. ಶಿವಾನಂದ ಪಾಟೀಲ್ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ ಎಂದರು.