ಬೆಂಗಳೂರು: ಸಾಮಾಜಿಕ ಸಾಮರಸ್ಯ ಬಹಳ ಮುಖ್ಯ. ವಸ್ತ್ರ ಸಂಹಿತೆ ಎನ್ನುವುದು ಕ್ಷೋಭೆಗೊಳಗಾಗುತ್ತಿದೆ. ಸಮಾಜದ ಸಾಮರಸ್ಯವನ್ನು ಕದಡಿದೆ. ತಿಳುವಳಿಕೆ ಉಳ್ಳವರಾಗಿ ಸೂತ್ರ ಕಂಡುಕೊಳ್ಳಬೇಕಿದೆ ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಸರ್ವಧರ್ಮ ಧಾರ್ಮಿಕ ಮುಖಂಡರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರೆಸ್ ಕೋಡ್ನಲ್ಲಿ ಸಂಘರ್ಷ ನಡೆದಿದೆ. ಅದರ ತೀವ್ರತೆ ತಗ್ಗಿಸಲು ಈ ಸಭೆ ಅನಿವಾರ್ಯ. ಕೋರ್ಟ್ನಲ್ಲೂ ವಿಚಾರಣೆ ನಡೆದಿದೆ. ಕೋರ್ಟ್ ಆದೇಶವನ್ನು ನಾವು ಒಪ್ಪಬೇಕಿದೆ. ಅದಕ್ಕೂ ಮುನ್ನ ಶಾಂತಿ ತರುವ ನಿಟ್ಟಿನಲ್ಲಿ ಮುಂದಾಗಿದ್ದೇವೆ. ಅನೇಕ ಸಂದರ್ಭದಲ್ಲಿ ಸಂಕಷ್ಟ ಎದುರಾಗುತ್ತದೆ. ಕೋವಿಡ್ ಸಂಕಷ್ಟ ಬಂತು. ಆ ಸಮಯದಲ್ಲಿ ನಾವು ಜನಸಾಮಾನ್ಯರ ಬಳಿ ಹೋಗಿ ಕಿಟ್, ಔಷಧಿ ವಿತರಣೆ ಮಾಡಿದ್ದೆವು. ಅನೇಕ ಮೌಲ್ವಿಗಳು ಇಲ್ಲಿ ಸೇರಿದ್ದಾರೆ ಎಂದು ಹೇಳಿದರು.
ಸರ್ವಧರ್ಮ ಧಾರ್ಮಿಕ ಮುಖಂಡರ ಸುದ್ದಿಗೋಷ್ಠಿ ಮೊದಲೇ ಇಂತದ್ದೊಂದು ಸಭೆ ಆಗಬೇಕಿತ್ತು. ಕೊರೊನಾದಿಂದ ಜನ ಸಂಕಷ್ಟದಲ್ಲಿದ್ದರು. ನಾವು ಜನರ ಜೊತೆಗಿದ್ದೆವು. ಈಗ ಬಂದಿರುವುದು ಸಂಕೀರ್ಣ ಸಂದರ್ಭ. ಕೊರೊನಾ ನಿಸರ್ಗ ನಿರ್ಮಿತ ಸಂದಿಗ್ಧತೆ. ಹಿಜಾಬ್ ಮಾನವ ನಿರ್ಮಿತ ಸಂಕೀರ್ಣ ಸಂದರ್ಭ. ಸಂಕೀರ್ಣ ಸಂದರ್ಭದಲ್ಲಿ ತೀವ್ರತೆ ತಗ್ಗಿಸಬೇಕು. ಹಾಗಾಗಿ, ಸಮಾಲೋಚನಾ ಸಭೆ ಹಮ್ಮಿಕೊಂಡಿದ್ದೇವೆ. ಎಲ್ಲಾ ಧರ್ಮಗಳಲ್ಲೂ ಧಾರ್ಮಿಕ ಮುಖಂಡರಿದ್ದಾರೆ. ನಮ್ಮ ಕರ್ತವ್ಯ ಏನು ಅನ್ನವುದನ್ನು ನಾವು ತಿಳಿಯಬೇಕು ಎಂದು ಹೇಳಿದರು.
ಬೋವಿ ಪೀಠದ ಇಮ್ಮಡಿ ಸಿದ್ಧರಾಮ ಶ್ರೀಗಳು ಮಾತನಾಡಿ, ನಮ್ಮ ದೇಶ ಹಲವು ಧರ್ಮಗಳ ತೋಟ. ಭಾರತ ಸಹಿಷ್ಣುತೆಯ ರಾಷ್ಟ್ರ. ನಮ್ಮ ಧರ್ಮದ ಜೊತೆ ಬೇರೆ ಧರ್ಮಕ್ಕೂ ಮಾನ್ಯತೆ ಕೊಡ್ತೇವೆ. ನಮಗೆ ಸಂವಿಧಾನ ಎನ್ನುವ ಧರ್ಮವಿದೆ. ಅದರ ಅಡಿಯಲ್ಲಿ ಎಲ್ಲ ಧರ್ಮಗಳಿಗೆ ಸ್ವಾತಂತ್ರ್ಯವಿದೆ. ಕೋರ್ಟ್ ಎಲ್ಲ ಧರ್ಮೀಯರ ಭಾವನೆಗೆ ಗೌರವ ಕೊಡುತ್ತದೆ. ನಾವೆಲ್ಲರೂ ಸಹೋದರರಾಗಿ ಬಾಳುತ್ತಿದ್ದೇವೆ. ನಾವು ಬಹಳ ಎಚ್ಚರಿಕೆಯಿಂದ ಜೀವನ ಕಳೆಯಬೇಕಿದೆ. ನ್ಯಾಯಾಲಯದ ತೀರ್ಪಿಗೆ ನಾವು ಬದ್ಧರಾಗಬೇಕಿದೆ. ತಾಳ್ಮೆ, ಶಾಂತಿ ಕಾಪಾಡಿಕೊಳ್ಳಬೇಕು. ಶಿಕ್ಷಣಕ್ಕೆ ಯಾವ ಧಕ್ಕೆಯಾಗಬಾರದು. ಗುರುಗಳ ಹೆಜ್ಜೆ ಅರ್ಥ ಪೂರ್ಣವಾಗಿದೆ, ಸಂಘರ್ಷಕ್ಕೆ ಜನ ಎಡೆಮಾಡಿಕೊಡುವುದು ಬೇಡ ಎಂದು ಮನವಿ ಮಾಡಿದರು.
ಜಗದ್ಗುರು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ನ್ಯಾಯಾಲಯದ ತೀರ್ಪು ಬರುವವರೆಗೂ ಶಾಂತಿ ಕಾಪಾಡಬೇಕು. ಶಾಲೆಯ ಆವರಣದಲ್ಲಿ ಶಾಂತಿ ಕಾಪಾಡೋದು ಮುಖ್ಯ. ಶಾಲೆ ಅಂದ್ರೆ ಸ್ನೇಹ ಇರುತ್ತದೆ, ಆದರೆ ಈಗ ಮುಖ ನೋಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ಕೋರ್ಟ್ ಆದೇಶ ಬರುವವರೆಗೂ ಶಾಂತಿಯಿಂದ ಇರಬೇಕು ಎಂದರು.
ಮೌಲಾನ ಸುಲೇಮಾನ್ ಖಾನ್ ಮಾತನಾಡಿ, ಈ ಹಿಜಾಬ್ ಕೇಸ್ ರಾಜ್ಯದಲ್ಲಿ ವಾತಾವರಣವನ್ನು ಹಾಳು ಮಾಡಿದೆ. ನಾವು ಇದರ ಬಗ್ಗೆ ಗಮನ ಕೊಡಬೇಕು. ಬೆಂಗಳೂರು ಕರಗವು ಹಿಂದೂ, ಮುಸ್ಲಿಮರ ಏಕತೆಯ ಹಬ್ಬ. ಒಂದೇ ಸತ್ಯವನ್ನೂ ನೂರಾರು ರೀತಿಯಲ್ಲಿ ವರ್ಣಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಸಾಮರಸ್ಯ, ಏಕತೆ, ವೈವಿಧ್ಯತೆಯನ್ನು ನಾವು ನೋಡ್ಕೊಂಡು ಬಂದಿದ್ದೇವೆ. ಕರಗ ಮೆರವಣಿಯಲ್ಲೂ ಬರುವ ವಿಜಯ ಕುಮಾರರಿಗೆ ಎಲ್ಲವೂ ಪಾನಕ ಹಂಚುತ್ತಾರೆ. ಎಲ್ಲಾ ಧರ್ಮದವರೂ ಪ್ರದಕ್ಷಿಣೆ ಕೂಡ ಹಾಕ್ತಾರೆ. ಎಲ್ಲರ ಜೊತೆ ಪ್ರೀತಿಯಿಂದ ಬಾಳಬೇಕು ಅನ್ನೋದೇ ನಮ್ಮ ಸಂದೇಶ ಎಂದರು.
ನಮ್ಮ ದೇಶದಲ್ಲಿ ಭಾವೈಕ್ಯತೆ, ಸಾಮರಸ್ಯ, ಏಕತೆ ಎಲ್ಲವೂ ಇದೆ. ನಾವು ನಮ್ಮ ಜವಾಬ್ದಾರಿಯನ್ನು ಉಳಿಸಿಕೊಂಡಿದ್ದೇವೆ. ಕೋರ್ಟ್ ತೀರ್ಪು ಇನ್ನೂ ಬಂದಿಲ್ಲ. ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳು ಈ ವಿವಾದವನ್ನು ಬೆಳೆಯುವುದಕ್ಕೆ ಬಿಡಬಾರದು. ಕ್ಲಾಸ್ ರೂಂಗೆ ಹಿಜಾಬ್ ಹಾಕಬಾರದು ಅಂಥ ಹೇಳಿದ್ದಾರೆ. ಅದನ್ನ ವಿದ್ಯಾರ್ಥಿನಿಯರು, ಪೋಷಕರು ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ನ್ಯಾಯಾಲಯ ಏನು ಹೇಳಿದೆ ಅದನ್ನು ಪಾಲನೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.