ಬೆಂಗಳೂರು:ಪಂಚೆ ಶರ್ಟ್ ಹಾಕಿದ್ದೇನೆ ಅಂತ ನಾನು ಸಾಮಾನ್ಯ ಮನುಷ್ಯ ಅಂತ ತಿಳ್ಕೋಬೇಡಿ ಎಂದು ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸಿಟ್ಟಾದ ಪ್ರಸಂಗ ನಡೆಯಿತು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯನ್ನು ಬೇಗ ಮುಗಿಸುವಂತೆ ಉಪಸಭಾಧ್ಯಕ್ಷರು ಸೂಚನೆ ನೀಡುತ್ತಿದ್ದ ಹಾಗೆಯೇ ಶಿವಲಿಂಗೇಗೌಡ ಸದನದ ಬಾವಿಗಿಳಿದು ಧರಣಿ ಮಾಡಿದರು. ಬಳಿಕ ಮಾತನಾಡಿದ ಅವರು, ನಾನು ಹೋಮ್ ವರ್ಕ್ ಮಾಡುತ್ತೇನೆ. ಎಕನಾಮಿಕ್ಸ್ ಸ್ಟೂಡೆಂಟ್. ನೂರಕ್ಕೆ ನೂರು ಅಂಕ ಪಡೆದು ಪಾಸ್ ಆಗಿದ್ದೇನೆ. ರಾಜ್ಯದ ಹಣಕಾಸು, ಪ್ರತಿ ಇಲಾಖೆಯ ಹಿಸ್ಟರಿಯನ್ನು ತೆಗೆದು ಬಿಚ್ಚಿ ಬಿಚ್ಚಿ ಹೊರಗೆಡವುತ್ತೇನೆ. ರಾಜ್ಯದ ಇತಿಹಾಸವನ್ನೂ ಹೊರಗೆಡವುತ್ತೇನೆ ಎಂದರು.
ಬಜೆಟ್ ಮೇಲೆ ಚರ್ಚೆ ವೇಳೆ ಮಾತು ಮುಗಿಸುವಂತೆ ಶಿವಲಿಂಗೇಗೌಡಗೆ ಉಪಸಭಾಧ್ಯಕ್ಷ ಆನಂದ್ ಮಾಮನಿ ಸೂಚನೆ ನೀಡಿದರು. ಉಪಸಭಾಧ್ಯಕ್ಷರ ಸೂಚನೆಗೆ ಸಿಟ್ಟಾದ ಶಿವಲಿಂಗೇಗೌಡ, ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಮಾತನಾಡಲು ನನಗೆ ಅವಕಾಶ ನೀಡುವಂತೆ ಆಗ್ರಹಿಸಿದರು.
ಈ ವೇಳೆ ಆಡಳಿತ ಪಕ್ಷದ ವಿಪ್ ಸತೀಶ್ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿ, ಇವರು ಪ್ರತಿ ಬಾರಿ ಹೀಗೇನೆ ಮಾಡುತ್ತಾರೆ. ಅನುಭವಸ್ತರು ಹೀಗೆ ಧರಣಿ ಮಾಡುವುದು ಸರಿಯಲ್ಲ. ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು ಎಂದು ಅಸಮಾಧಾನ ಹೊರಹಾಕಿದರು. ಬಳಿಕ ಅನ್ನದಾನಿ ಬಾವಿಗಿಳಿದ ಶಿವಲಿಂಗೇಗೌಡರನ್ನು ಸಮಾಧಾನಪಡಿಸಿ ಕರೆದೊಯ್ದರು.
ಮಾತು ಮುಂದುವರಿಸಿದ ಶಿವಲಿಂಗೇಗೌಡ, ಸಾಲಕ್ಕಾಗಿಯೇ ಎಲ್ಲಾ ಹಣ ಹೋದರೆ ಅಭಿವೃದ್ಧಿಗೆ ಹೇಗೆ ಮಾಡುತ್ತೀರಾ. ಜಿಎಸ್‌ಟಿ ಹಣದಲ್ಲಿ ನಮಗೆ ಅನ್ಯಾಯವಾಗಿದೆ. ಸಾಲದ ಹಣದಿಂದ ವೆಚ್ಚವನ್ನು ಹೆಚ್ಚು ಮಾಡಲು ಸಾಧ್ಯವಾಗಿದೆ. ನಮ್ಮ ಆದಾಯದಿಂದ ಅಲ್ಲ. ಸಾಲದಿಂದ ನಾವು ಇಕ್ಕಟ್ಟಿಗೆ ಸಿಲುಕುತ್ತಿದ್ದೇವೆ. 2002ರಲ್ಲಿ ವಿತ್ತೀಯ ನಿಯಮಾವಳಿ ರಚನೆ ಮಾಡಿದ್ದೇವೆ. ಆದರೆ ಅದ್ಯಾವುದನ್ನೂ ಈ ಬಾರಿ ಅನುಸರಿಸಿಲ್ಲ. ಸಂಬಳ ಕೊಡುವುದು ನಿಲ್ಲಲ್ಲ, ಸಾಲ ಮಾಡುವುದು ನಿಲ್ಲಲ್ಲ, ಖರ್ಚು ವೆಚ್ಚ ನಿಲ್ಲಲ್ಲ. ನಿಲ್ಲುವುದು ಅಭಿವೃದ್ಧಿ ಕೆಲಸ ಮಾತ್ರ ಎಂದು ತಿಳಿಸಿದರು.
ಇದನ್ನೂ ಓದಿ:ಹೊರಟ್ಟಿ ವಿರುದ್ಧ ಧಾರವಾಡದಲ್ಲಿ ಎಫ್ಐಆರ್: ಪರಿಷತ್‌ನಲ್ಲಿ ಗಂಭೀರ ಚರ್ಚೆ