ಬೆಂಗಳೂರು : ಮತದಾರರ ಚೀಟಿ ಹೊಂದಿಲ್ಲದ ಕಾರಣ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದೆ. ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಾಫರ್ ಅಲಿ ಅವರ ನಾಮಪತ್ರ ತಿರಸ್ಕೃತ ಆಗಿರುವುದನ್ನು ಶಿವಾಜಿನಗರ ಆರ್‌ಓ ಬಸವರಾಜ್ ಸೋಮಣ್ಣನವರ್ ಖಚಿತಪಡಿಸಿದ್ದಾರೆ.
ಜೆಡಿಎಸ್ ಪಕ್ಷವು ಅಬ್ದುಲ್ ಜಾಫರ್ ಅಲಿ ಎಂಬುವವರಿಗೆ ಟಿಕೆಟ್ ನೀಡಿತ್ತು. ಪಕ್ಷದ ನಿರ್ದೇಶನ ಮೇರೆಗೆ ಅಬ್ದುಲ್ ಜಾಫರ್ ಅಲಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ, ಜಾಫರ್ ಅಲಿ ರಾಜ್ಯದಲ್ಲಿ ಎಲ್ಲಿಯೂ ಮತದಾರರ ಚೀಟಿ ಹೊಂದಿಲ್ಲದಿರುವುದು ಗೊತ್ತಾಗಿದೆ. ಹೀಗಾಗಿ ಚುನಾವಣಾಧಿಕಾರಿಗಳು ಅವರ ನಾಮಪತ್ರ ತಿರಸ್ಕೃತಗೊಳಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮಂಜುನಾಥ್ ಎಂಬುವವರಿಂದಲೂ ನಾಮಪತ್ರ ಸಲ್ಲಿಕೆ ಮಾಡಿಸಲಾಗಿದೆ. ಆದರೆ, ಮಂಜುನಾಥ್ ನಾಮಪತ್ರದ ಜೊತೆ ಬಿ ಫಾರಂ ಇರಲಿಲ್ಲ ಮತ್ತು ನಿಗದಿತ ಅವಧಿ ಮುಗಿದ ಬಳಿಕ ಸಲ್ಲಿಕೆ ಮಾಡಿರುವುದರಿಂದ ಅವರ ನಾಮಪತ್ರವನ್ನೂ ತಿರಸ್ಕರಿಸಲಾಗಿದೆ.
ಇದನ್ನೂ ಓದಿ:ರಂಗೇರಿದ ಚುನಾವಣಾ ಕಣ: ಮೋದಿ, ಯೋಗಿಯಿಂದ ನಡೆಯಲಿದೆ ರಾಜ್ಯದಲ್ಲಿ ಚುನಾವಣಾ ಪ್ರಚಾರ
ನಾಮಪತ್ರ ತಿರಸ್ಕೃತ ಪಕ್ಷದಲ್ಲಿ ಅಸಮಾಧಾನ: ಜಾಫರ್ ಅಲಿ ವಿದೇಶದಲ್ಲಿದ್ದರು, ರಾಜ್ಯಕ್ಕೆ ಹಿಂತಿರುಗಿದ ಬಳಿಕ ರಾಜಕೀಯಕ್ಕೆ ಪ್ರವೇಶಿಸಲು ಇಚ್ಛೆ ಹೊಂದಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು. ರಾಜ್ಯಕ್ಕೆ ಬಂದ ನಂತರ ಯಾವುದೇ ಕ್ಷೇತ್ರದಲ್ಲಿಯೂ ಮತದಾರರ ಚೀಟಿಯನ್ನು ಮಾಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾಮಪತ್ರ ತಿರಸ್ಕೃತಗೊಂಡಿರುವುದು ಪಕ್ಷದಲ್ಲಿ ಅಸಮಾಧಾನ ಮೂಡಿದೆ. ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ನಂತರ ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ನಿಂದ ಹಾಲಿ ಶಾಸಕ ರಿಜ್ವಾನ್ ಅರ್ಷದ್ ಕಣದಲ್ಲಿದ್ದರೆ, ಬಿಜೆಪಿಯಿಂದ ಎನ್. ಚಂದ್ರ ಅವರು ಸ್ಪರ್ಧಿಸಿದ್ದಾರೆ.