ಬೆಂಗಳೂರು:ಶಿವಮೊಗ್ಗದಲ್ಲಿ ನಡೆದ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ನ್ಯಾಯಾಂಗ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ. ನಮ್ಮ ಪೊಲೀಸರೇ ಸಮರ್ಥರಿದ್ದಾರೆ. ಅವರೇ ತನಿಖೆ ನಡೆಸಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಶಿವಮೊಗ್ಗ ಘಟನೆ ಪ್ರಸ್ತಾಪಿಸಿದರು. ಶಾಂತವೇರಿ ಗೋಪಾಲಗೌಡರನ್ನು ಕೊಟ್ಟ ಭೂಮಿಯಲ್ಲಿ ಕೋಮು ದಳ್ಳುರಿ ಶುರುವಾಗಿದೆ. ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ನಡೆದಿದೆ. ಹರ್ಷ ಎನ್ನುವ ಯುವಕನ ಹತ್ಯೆ ಖಂಡನೀಯ.
ಆತನಿಗೆ ಈ ಹಿಂದೆಯೇ ಬೆದರಿಕೆ ಇತ್ತು, ಆತನಗೆ ಭೀತಿ ಇದ್ದಿದ್ದು ಪೊಲೀಸ್ ಇಲಾಖೆಗೆ ಗೊತ್ತಿತ್ತು. ಆದರೂ ರಕ್ಷಣೆ ನೀಡುವಲ್ಲಿ ಗೃಹ ಇಲಾಖೆ ಎಡವಿದೆ. ಕೂಡಲೇ ಈ ಬಗ್ಗೆ ತನಿಖೆಗೆ ಆದೇಶಿಸಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ವಾಹನಗಳಿಗೆ ಬೆಂಕಿ, ಹಲವಾರು ಜನರಿಗೆ ಹಲ್ಲೆ, ಅಂಗಡಿ-ಮುಂಗಟ್ಟುಗಳ ಹಾನಿ, ಮನೆಗಳನ್ನು ದ್ವಂಸಗೊಳಿಸಲಾಗಿದೆ. ಶಿವಮೊಗ್ಗದಲ್ಲಿ ಈ ರೀತಿಯ ಘಟನೆ ಪ್ರಥಮ ಬಾರಿಗೆ ನಡೆದಿದೆ. ಸರ್ಕಾರ ಎಲ್ಲಿ ಹೋಗಿದೆ, ಗೃಹ ಸಚಿವರು ಎಲ್ಲಿ ಹೋಗಿದ್ದಾರೆ? ಹತ್ಯೆ ಪ್ರಕರಣದ ತನಿಖೆ ಆಗಬೇಕು, ನ್ಯಾಯಾಂಗ ತನಿಖೆ ಆಗಬೇಕು, ಘಟನೆ, ಘಟನೋತ್ತರ ಎರಡೂ ತನಿಖೆ ಆಗಬೇಕು. ನೊಂದವರ ಕುಟುಂಬಕ್ಕೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಮಾರ್ಚ್ 4ಕ್ಕೆ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿರುವ ಸಿಎಂ ಬೊಮ್ಮಾಯಿ
ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಶಾಂತವಾಗಿದ್ದ ಶಿವಮೊಗ್ಗದಲ್ಲಿ ಅಶಾಂತಿ ಸೃಷ್ಟಿಸಲಾಗಿದೆ. ಶಿವಮೊಗ್ಗದವರ ಜೊತೆಗೆ ಬೆಂಗಳೂರಿನವರು ಸೇರಿ ಈ ಕೃತ್ಯ ಎಸಗಿದ್ದಾರೆ. ಹಿಂದೆಯೂ ಇಂತಹ ಘಟನೆ ಆಗಿತ್ತು. ಪರಿಷತ್ ಸದಸ್ಯ ಡಿ.ಎಸ್.ಅರುಣ್ಗೆ ಸಂದೇಶ ಬಂದಿದೆ, ಈಗ ಸತ್ತವರು ಯಾರೋ ಇರಬಹುದು, ಮುಂದೆ ನಿಮ್ಮ ಕುಟುಂಬ ಇರಬಹುದು ಎಂದಿದ್ದಾರೆ. ಪಿಎಫ್ಐನಂತಹ ಸಂಘಟನೆಗಳಿಂದ ಅಶಾಂತಿ ಸೃಷ್ಟಿಯಾಗಿದೆ.
ಹಾಗಾಗಿ, ಸಮಾಜದಲ್ಲಿ ಶಾಂತಿ ಕದಡುವ ಶಕ್ತಿಯನ್ನು ಧಮನಿಸಬೇಕು, ಈ ಸಂಘಟನೆಗಳನ್ನು ನಿಷೇಧಿಸಬೇಕು. ಹರ್ಷನ ಕುಟುಂಬಕ್ಕೆ ಸರ್ಕಾರ ಆರ್ಥಿಕ ಸಹಾಯ ನೀಡಬೇಕು. ಈಗ ಶಿವಮೊಗ್ಗ ನಿಯಂತ್ರಣದಲ್ಲಿದೆ. ಯಾರೂ ಕೂಡ ಪ್ರಚೋದನಾತ್ಮಕ ಹೇಳಿಕೆ ನೀಡದೆ ಶಾಂತಿ ಕಾಪಾಡಲು ಸರ್ಕಾರದ ಪ್ರಯತ್ನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.