ಕರ್ನಾಟಕ

karnataka

ETV Bharat / state

ಕಂದಾಯ ಇಲಾಖೆ ಆಯುಕ್ತರಿಂದ ಶಿವಮೊಗ್ಗ ಸ್ಫೋಟ ಕುರಿತು ನಿಷ್ಪಕ್ಷಪಾತ ತನಿಖೆ: ಸಚಿವ ನಿರಾಣಿ - ಕಂದಾಯ ಇಲಾಖೆಯ ಆಯುಕ್ತ

ಶಿವಮೊಗ್ಗ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಅನಧಿಕೃತ ಗಣಿಗಾರಿಕೆ ಮತ್ತು ಸಾಗಣೆ ಸಂಬಂಧ ಒಟ್ಟು 137 ಮೊಕದ್ದಮೆಗಳನ್ನು ದಾಖಲಿಸಲಾಗಿರುತ್ತದೆ ಮತ್ತು ಒಟ್ಟು 66 ಪ್ರಕರಣಗಳಲ್ಲಿ ರೂ.67.95 ಲಕ್ಷಗಳ ದಂಡ ವಸೂಲಿ ಮಾಡಲಾಗಿದೆ ಎಂದು ನಿರಾಣಿ ಮಾಹಿತಿ ನೀಡಿದ್ದಾರೆ.

ಸಚಿವ ಮುರುಗೇಶ್ ನಿರಾಣಿ
ಸಚಿವ ಮುರುಗೇಶ್ ನಿರಾಣಿ

By

Published : Feb 2, 2021, 8:52 PM IST

ಬೆಂಗಳೂರು: ಶಿವಮೊಗ್ಗದ ಹುಣಸೋಡಿನ ಕಲ್ಲು ಕ್ವಾರಿ ಸ್ಫೋಟ ಘಟನೆಯನ್ನು ಕಂದಾಯ ಇಲಾಖೆಯ ಆಯುಕ್ತರಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ವಿಧಾನಪರಿಷತ್​​​​ನಲ್ಲಿ ತಿಳಿಸಿದ್ದಾರೆ.

ನಿಯಮ 68ರಡಿ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಈ ಸಂಬಂಧ ಸ್ಟೋನ್ ಕ್ರಷರ್ ಮಾಲೀಕ ಡಿ.ವಿ ಸುಧಾಕರ್ ಮತ್ತು ಜಮೀನು ಮಾಲೀಕ ಕುಲಕರ್ಣಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕ್ರಷರ್ ಘಟಕದ ಲೈಸೆನ್ಸ್ ರದ್ದುಪಡಿಸಲಾಗಿದೆ ಎಂದರು.

ಘಟನೆಗೆ ಕಾರಣವಾದ 65 ಸಾವಿರ ಡಿಟೋನೇಟರ್ಸ್, 1,275 ಕೆ.ಜಿ ಜಿಲೆಟಿನ್, 17,500 ಮೀಟರ್ ಸೇಫ್ಟಿ ಫ್ಯೂಸ್ ವಶಪಡಿಸಿಕೊಳ್ಳಲಾಗಿದೆ. ಹೊಸದಾಗಿ ಕ್ರಷರ್ ಘಟಕಗಳಿಗೆ ಲೈಸನ್ಸ್ ಮಂಜೂರು ಮತ್ತು ನವೀಕರಣ ಮಾಡದಂತೆ ತೀರ್ಮಾನಿಸಲಾಗಿದೆ ಎಂದರು.

ಘಟನೆ ನಡೆದ ಪ್ರದೇಶದಲ್ಲಿ ಮಂಜೂರಾಗಿರುವ ಜಮೀನುಗಳ ಗ್ರಾಂಟ್‍ಗಳನ್ನು ರದ್ದುಪಡಿಸಲಾಗಿದ್ದು, ಸ್ಫೋಟದಲ್ಲಿ ಮೃತಪಟ್ಟ 6 ಜನರಿಗೆ ತಲಾ 5 ಲಕ್ಷ ಪರಿಹಾರವನ್ನು ನೀಡಲಾಗಿದೆ. ನಾಲ್ವರ ಗುರುತು ಪತ್ತೆ ತಡವಾಗಿದ್ದರಿಂದ ಪರಿಹಾರ ನೀಡಲು ವಿಳಂಬವಾಗಿದೆ. ಶೀಘ್ರ ನೀಡುತ್ತೆವೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಅನಧಿಕೃತ ಗಣಿಗಾರಿಕೆ ಮತ್ತು ಸಾಗಣೆ ಸಂಬಂಧ ಒಟ್ಟು 137 ಮೊಕದ್ದಮೆಗಳನ್ನು ದಾಖಲಿಸಲಾಗಿರುತ್ತದೆ ಮತ್ತು ಒಟ್ಟು 66 ಪ್ರಕರಣಗಳಲ್ಲಿ 67.95 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ಕಲ್ಲುಗಣಿಗುತ್ತಿಗೆ ಪ್ರದೇಶಗಳಲ್ಲಿ ಪ್ರತಿ ಬಾರಿ ಸ್ಫೋಟಕ ಉಪಯೋಗಿಸುವ ಮೊದಲು ಸಂಬಂಧಿಸಿದ ಪೋಲಿಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ಒದಗಿಸುವಂತೆ ಕಲ್ಲುಗಣಿ ಗುತ್ತಿಗೆದಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಮತ್ತು ನಿರ್ಮಾಣ ಕಾಮಗಾರಿಗಳಿಗೆ ಕಟ್ಟಡ ಕಲ್ಲು ಮತ್ತು ಕಟ್ಟಡ ಕಲ್ಲಿನ ಸಂಸ್ಕರಿಸಿದ ಉತ್ಪನ್ನಗಳಾದ ವಿವಿಧ ನಮೂನೆ ಜಲ್ಲಿ, ಎಂ-ಸ್ಯಾಂಡ್ ಮತ್ತು ಮರಳು ಅತೀ ಅವಶ್ಯವಾಗಿರುತ್ತದೆ. ರಾಜ್ಯದ ಬೇಡಿಕೆಗೆ ಅನುಗುಣವಾಗಿ ಜಲ್ಲಿ, ಎಂ-ಸ್ಯಾಂಡ್ ಇತ್ಯಾದಿ ಕಟ್ಟಡ ಸಾಮಗ್ರಿಗಳ ನಿಯಮಿತ ಪೂರೈಕೆಗಾಗಿ ಕಟ್ಟಡ ಕಲ್ಲು ಗಣಿಗಾರಿಕೆಗಾಗಿ ಕಲ್ಲುಗುತ್ತಿಗೆ ಮಂಜುರಾತಿ ಮತ್ತು ಕ್ರಷರ್ ಲೈಸೆನ್ಸ್ ನೀಡುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಪ್ರಸ್ತುತ ರಾಜ್ಯದಲ್ಲಿ ಒಟ್ಟು 2,493 ಕಲ್ಲುಗಣಿ ಗುತ್ತಿಗೆಗಳನ್ನು ಮತ್ತು 1,682 ಕ್ರಷರ್ ಘಟಕಗಳಿಗೆ ಲೈಸೆನ್ಸ್ ಮಂಜೂರು ಮಾಡಲಾಗಿರುತ್ತದೆ ಮತ್ತು ಒಟ್ಟು 289 ಎಂ-ಸ್ಯಾಂಡ್ ಘಟಕಗಳು ಚಾಲ್ತಿಯಲ್ಲಿರುತ್ತದೆ.

ಗಣಿ ಮತ್ತುಭೂವಿಜ್ಞಾನ ಇಲಾಖೆಯು ರಾಜಸ್ವ ಸಂಗ್ರಹಿಸುವ ಇಲಾಖೆಯಾಗಿರುತ್ತದೆ. 2019-20ನೇ ಸಾಲಿನಲ್ಲಿ ಒಟ್ಟು 3,629 ಕೋಟಿ ರಾಜಸ್ವ ಮತ್ತು 2020-21ನೇ ಸಾಲಿನಲ್ಲಿ 2,318 ಕೋಟಿ ರಾಜಸ್ವ ಸಂಗ್ರಹಿಸಲಾಗಿದೆ.

ರಾಜ್ಯದಲ್ಲಿ ಸರಾಸರಿ ಒಟ್ಟು 250 ದಶಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಕಟ್ಟಡ ಕಲ್ಲು ಖನಿಜದ ಬೇಡಿಕೆ ಇರುತ್ತದೆ. 2019-20ನೇ ಸಾಲಿನಲ್ಲಿ ಕಟ್ಟಡ ಕಲ್ಲುಗಣಿಗಾರಿಕೆಯಿಂದ 1,486 ಕೋಟಿ ಮತ್ತು 2020-21ನೇ ಸಾಲಿನಲ್ಲಿ 735.53 ಕೋಟಿ ರಾಜಧನ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಶಾಸಕರ ನಿರಾಸಕ್ತಿ: ಸದಸ್ಯರಿಲ್ಲದೇ ಬಣಗುಟ್ಟಿದ ವಿಧಾನಸಭೆ ಕಲಾಪ

ABOUT THE AUTHOR

...view details