ಬೆಂಗಳೂರು :ಹುಬ್ಬಳ್ಳಿ-ಧಾರವಾಡ ಭಾಗದ ಪ್ರಭಾವಿ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟಿಕೆಟ್ ಕೈ ತಪ್ಪಿದ ಕಾರಣಕ್ಕೆ ಬಿಜೆಪಿ ತೊರೆದಿದ್ದು, ಅದರ ಪರಿಣಾಮ ಬಿಜೆಪಿ ಮೇಲಾಗದಂತೆ ಮುನ್ನೆಚ್ಚರಿಕೆ ವಹಿಸಲು ಹೈಕಮಾಂಡ್ ಪಕ್ಷದ ಹಿರಿಯ ನಾಯಕ ಹಾಗು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಸೂಚಿಸಿದೆ. ಶೆಟ್ಟರ್ ಪ್ರಭಾವವಿರುವ ಕಡೆ ಈಗ ಯಡಿಯೂರಪ್ಪ ಹೆಚ್ಚಿನ ಪ್ರಚಾರ ನಡೆಸಿ 'ಶೆಟ್ಟರ್ ಫ್ಯಾಕ್ಟರ್' ಬಿಜೆಪಿ ಮೇಲಾಗದಂತೆ ನೋಡಿಕೊಳ್ಳಲು ಮುಂದಾಗಿದೆ. ಜೊತೆಗೆ, ವೀರಶೈವ ಲಿಂಗಾಯತ ಸಮುದಾಯದ ಮತಗಳು ಚದುರದಂತೆ ಯಡಿಯೂರಪ್ಪ ಮೂಲಕವೇ ಹಿಡಿದಿಟ್ಟುಕೊಳ್ಳಲು ವರಿಷ್ಠರು ಚಿಂತನೆ ನಡೆಸಿದ್ದಾರೆ.
ವರಿಷ್ಠರ ಸಂದೇಶ ಬರುತ್ತಿದ್ದಂತೆ ಇಂದು ತುರ್ತು ಸುದ್ದಿಗೋಷ್ಟಿ ನಡೆಸಿದ ಯಡಿಯೂರಪ್ಪ, ಶೆಟ್ಟರ್ ಮನವೊಲಿಕೆ ಕಾರ್ಯದಲ್ಲಿ ನಡೆದ ಆಂತರಿಕ ವಿಷಯಗಳನ್ನು ಬಹಿರಂಗಪಡಿಸಿ ಮೊದಲ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದ ಶೆಟ್ಟರ್ ಅವರನ್ನು ಕೇಂದ್ರಕ್ಕೆ ಬರುವಂತೆ ಸೂಚಿಸಲಾಗಿತ್ತು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಅವರ ಕುಟುಂಬದ ಯಾರಿಗಾದರೂ ಅಥವಾ ಅವರು ಹೇಳುವ ಯಾರಿಗಾದರೂ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಹೊಸ ಮುಖಕ್ಕೆ ಅವಕಾಶ ನೀಡಿ ಯುವಪೀಳಿಗೆಯನ್ನು ಬೆಳೆಸಲು ಕೈಗೊಂಡ ನಿರ್ಣಯ ಇದಾಗಿತ್ತು. ಆದರೂ ಇದನ್ನು ಒಪ್ಪದೆ ಶೆಟ್ಟರ್ ಪಕ್ಷ ತೊರೆದಿದ್ದಾರೆ ಎಂದು ಜಗದೀಶ್ ಶೆಟ್ಟರ್‌ಗೆ ಟಾಂಗ್ ನೀಡಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇಬ್ಬರಿಗೂ ಪಕ್ಷ ಭವಿಷ್ಯದ ಆಫರ್ ನೀಡಿದ್ದರೂ ತಿರಸ್ಕರಿಸಿ ಹೊರ ನಡೆದಿದ್ದಾರೆ. ಹಾಗಾಗಿ ಇಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಹೇಳಿಕೆ ನೀಡಿರುವ ಯಡಿಯೂರಪ್ಪ ಪಕ್ಷದಲ್ಲಿ ವೀರಶೈವ ಲಿಂಗಾಯರಿಗೆ ಎಲ್ಲ ರೀತಿಯ ಅವಕಾಶಗಳೂ ಸಿಕ್ಕಿವೆ. ಈ ಸಮುದಾಯವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ, ಹಿಂದೆಯೂ ಕಡೆಗಣಿಸಿರಲಿಲ್ಲ. ಮುಂದೆಯೂ ಕಡೆಗಣಿಸಲ್ಲ, ಕಾಂಗ್ರೆಸ್ ಮಾಡುತ್ತಿರುವ ಆರೋಪ ನಿರಾಧಾರ ಎಂದು ವೀರಶೈವ ಲಿಂಗಾಯತ ಸಮುದಾಯ ಬಿಜೆಪಿಯಿಂದ ಚದುರುವುದನ್ನು ತಡೆಯುವ ಪ್ರಯತ್ನ ನಡೆಸಿದ್ದಾರೆ.