ಶಿವಮೊಗ್ಗ:"ಜಗದೀಶ್ ಶೆಟ್ಟರ್ ಅವರು 40 ವರ್ಷ ಬಿಜೆಪಿಯಲ್ಲಿ ಕೆಲಸ ಮಾಡಿದ ವ್ಯಕ್ತಿ. ಅವರೊಬ್ಬ ಸಿದ್ಧಾಂತವಾದಿ. ಆದರೆ, ಟಿಕೆಟ್ ಕೊಡಲಿಲ್ಲ, ಪಕ್ಷದಲ್ಲಿ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಹೇಳಿದ್ದು ಕೇಳಿ ಬಹಳ ನೋವಾಯಿತು" ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು.
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, "ಜಗದೀಶ್ ಶೆಟ್ಟರ್ ಹೋರಾಟ ಮಾಡಿಕೊಂಡು ಬಂದ ವ್ಯಕ್ತಿ. ಹುಬ್ಬಳ್ಳಿಯಲ್ಲಿ ತಿರಂಗ ಧ್ವಜಕ್ಕಾಗಿ ಹೋರಾಟ ಮಾಡಿದ್ದರು. ಶೆಟ್ಟರ್ ಹೋರಾಟದ ಭೂಮಿಯಿಂದ ಬಂದವರು. ಅಂತಹ ಭೂಮಿಯಿಂದ ಬಂದು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ನಿಮಗೆ ಒಂದು ಟಿಕೆಟ್ ಕೊಟ್ಟಿರಬಹುದು, ಆದರೆ ಹೋರಾಟದ ಮಣ್ಣಿನಲ್ಲಿ ನೀವು ಗೆಲ್ಲುವುದಿಲ್ಲ" ಎಂದರು.
"ಕಾಂಗ್ರೆಸ್ನಲ್ಲೇ ಹಲವು ಗುಂಪುಗಳಿದ್ದಾವೆ. ಇವರು ಯಾವ ಗುಂಪಿಗೆ ಸೇರುತ್ತಾರೋ ಗೊತ್ತಿಲ್ಲ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಬಿಲ್ ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ. ಆಗ ನಿಮ್ಮ ಸಿದ್ಧಾಂತ ಎಲ್ಲಿ ಹೋಗುತ್ತದೆ ಎಂದು ಪ್ರಶ್ನಿಸಿದರು. ಒಂದು ಟಿಕೆಟ್ಗಾಗಿ ನಿಮ್ಮ ಇಡೀ ಸಿದ್ಧಾಂತವನ್ನು ಗಾಳಿಗೆ ತೂರಿದರಲ್ಲ, ಕೇವಲ ಅಧಿಕಾರಕ್ಕಾಗಿ ನೀವು ಕಾಂಗ್ರೆಸ್ ಸೇರುತ್ತೀರಾ ಎಂದಿದ್ದರೆ, ಪಕ್ಷ ನಿಮ್ಮನ್ನು ಇಷ್ಟು ಬೆಳೆಸುತ್ತಿರಲಿಲ್ಲ. ಸಾಮಾನ್ಯ ಕಾರ್ಯಕರ್ತರಾಗಿದ್ದ ನಿಮ್ಮನ್ನು ಆರು ಬಾರಿ ಶಾಸಕರನ್ನಾಗಿ ಮಾಡಿದರು. ವಿಪಕ್ಷ ನಾಯಕ, ಸ್ಪೀಕರ್, ಮಂತ್ರಿ, ಮುಖ್ಯಮಂತ್ರಿ ಮಾಡಿದರು. ಆದರೂ ಪಕ್ಷ ಚೆನ್ನಾಗಿ ನಡೆಸಿಕೊಂಡಿಲ್ಲ ಅಂತ ಹೇಳುತ್ತಿದ್ದೀರಿ" ಎಂದು ಬೇಸರ ವ್ಯಕ್ತಪಡಿಸಿದರು.