ಬೆಂಗಳೂರು:ಲಾಕ್ಡೌನ್ ಆದೇಶವಿದ್ದರೂ ನಟಿ ಶರ್ಮಿಳಾ ಮಾಂಡ್ರೆ ಜಾಲಿ ಡ್ರೈವ್ ಹೋಗಿ ಕಾರು ಅಪಘಾತ ಮಾಡಿಕೊಂಡ ಸಂಬಂಧ ಹೈಗ್ರೌಂಡ್ಸ್ ಸಂಚಾರಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶರ್ಮಿಳಾ ಮಾಂಡ್ರೆ ಕಾರು ಆ್ಯಕ್ಸಿಡೆಂಟ್ ಕೇಸ್.. ಎಲ್ಲಾ ಆಯಾಮಗಳಲ್ಲಿ ತನಿಖೆ ಎಂದ ಪೊಲೀಸರು - ನಟಿ ಶರ್ಮಿಳಾ ಮಾಂಡ್ರೆ ಮೇಲೆ ಕೇಸ್ ದಾಖಲು
ನಟಿ ಶರ್ಮಿಳಾ ಮಾಂಡ್ರೆ ಕಾರ್ ಅಪಘಾತ ಸಂಬಂಧ ಹೈಗ್ರೌಂಡ್ಸ್ ಸಂಚಾರಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ಮಧ್ಯರಾತ್ರಿ 2.50 ರ ವೇಳೆಗೆ ವಸಂತ ನಗರದಲ್ಲಿರುವ ರೈಲ್ವೆ ಕಂಬಕ್ಕೆ ಜಾಗ್ವಾರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲೇ ಕಾರಿನ ಮಾಲೀಕರು ನಾಪತ್ತೆಯಾಗಿದ್ದರು. ಈ ಸಂಬಂಧ ಕಾರಿನ ಮಾಲೀಕರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಿದಾಗ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ಲೋಕೇಶ್ ವಸಂತ್ ಎಂಬುವರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹೊರರೋಗಿಯಾಗಿ ಚಿಕಿತ್ಸೆಗಾಗಿ ದಾಖಲಿಸುವಾಗ ಜಯನಗರದಲ್ಲಿ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ. ಸಂಚಾರಿ ನಿಯಮ ಉಲ್ಲಂಘಿಸಿದ್ದು, ಲಾಕ್ಡೌನ್ ಜಾರಿಯಿದ್ದರೂ ನೈಸರ್ಗಿಕ ವಿಪತ್ತು ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು. ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಹೇಳಿಕೆ ಪಡೆದ ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಸಂಚಾರ ವಿಭಾಗದ ಟ್ರಾಫಿಕ್ ಕಮಿಷನರ್ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.