ಬೆಂಗಳೂರು :ಶಾಸಕ ಜಮೀರ್ ಅಹಮದ್ ನಮ್ಮ ನಾಯಕರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಕುಮಾರಣ್ಣ ಅವರ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವುದು ಸರಿಯಲ್ಲ. ಅವರು ಬಹಿರಂಗ ಕ್ಷಮೆ ಕೋರಬೇಕೆಂದು ವಿಧಾನಪರಿಷತ್ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಟಿ.ಎ. ಶರವಣ ಆಗ್ರಹಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರ ಬಗ್ಗೆ ಮಾತನಾಡಿರುವುದು ಪಕ್ಷದ ಕಾರ್ಯಕರ್ತರಿಗೆ ಬಹಳ ಬೇಸರ ಮೂಡಿಸಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗಬಹುದು ಎಂದುಕೊಂಡಿದ್ದಾರೆ. ಆದ್ರೆ ಜೆಡಿಎಸ್ ಪಕ್ಷವು, ಸೀಮೆ ಎಣ್ಣೆ ಕ್ಯಾನ್ ಹಿಡಿದು ದರಿದ್ರ ನಾರಾಯಣ ಎಂಬ ಹೆಸರಿನಲ್ಲಿ ಇಡೀ ಕ್ಷೇತ್ರ ಓಡಾಡಿ ತನು ಮನ ಧನ ಎಲ್ಲವನ್ನೂ ಕೊಟ್ಟು ಚಾಮರಾಜಪೇಟೆಯ ಗಲ್ಲಿ ಗಲ್ಲಿಗಳಲ್ಲಿ ಓಡಾಡಿ ನಿಮ್ಮನ್ನು ( ಜಮೀರ್ ಅಹಮದ್ ) ಗೆಲ್ಲಿಸಿಕೊಂಡರು. ಅದೆಲ್ಲಾ ಮರೆತ್ರಾ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರ ಬಗ್ಗೆ ಯಾಕೆ ಹೀಗೆ ಮಾತನಾಡುತ್ತೀರಾ ಎಂದು ಪ್ರಶ್ನಿಸಿದ ಶರವಣ, ಒಂದು ಸಮುದಾಯವನ್ನು ಜಮೀರ್ ಅಹಮದ್ ಟಾರ್ಗೆಟ್ ಮಾಡ್ತಿದ್ದಾರೆ. ಜೆಡಿಎಸ್ನಲ್ಲಿ ಇದ್ದಾಗ ಅಧಿಕಾರ ಅನುಭವಿಸಿ, ಈಗ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಹೋರಾಟದ ಎಚ್ಚರಿಕೆ :
ಕೂಡಲೇ ಕುಮಾರಣ್ಣ ಅವರ ಬಳಿ ಕ್ಷಮೆ ಕೇಳಬೇಕು. ಇನ್ನು ಮುಂದೆ ಟೀಕೆ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಎಲ್ಲಿದ್ದಾರೆ ಜೆಡಿಎಸ್ ಶಾಸಕರು ಅಂತಾ ಹೇಳ್ತಿದ್ದಾರೆ. ನಿಮ್ಮದೇ ಕ್ಷೇತ್ರದ ಜನರಿಗೆ ನಾನು ಆಹಾರ ಕೊಟ್ಟಿದ್ದೇನೆ. ಕೋವಿಡ್ ಸಂದರ್ಭದಲ್ಲಿ ನಮ್ಮವರು ರಾಜಕೀಯ ಮಾಡಿಲ್ಲ. ಮನೆಯಲ್ಲಿ ಕುಳಿತಿದ್ದಾರೆ ಅಂದುಕೊಳ್ಬೇಡಿ. ಸಮುದಾಯಗಳನ್ನ ಎತ್ತಿಕೊಟ್ಟೋದನ್ನು ನಿಲ್ಲಿಸಿ. ಮೊದಲು ನಿಮ್ಮ ಪಕ್ಷದ ಬಗ್ಗೆ ನೋಡಿಕೊಳ್ಳಿ ಎಂದು ಶರವಣ ಕಿಡಿಕಾರಿದರು.
ನಮ್ಮವರು ಯಾರು ಪಲ್ಟಿ ಹೊಡೆದಿದ್ದಾರೆ. ಪಲ್ಟಿ ಹೊಡೆದು ವೋಟನ್ನು ಮಾರಾಟ ಮಾಡಿಕೊಂಡ್ರಲ್ಲಾ ಅದು ಪಲ್ಟಿ. ಸಿದ್ದರಾಮಯ್ಯ ಅವರನ್ನು ವೋಲೈಸಲು ಪಲ್ಟಿ ಹೊಡೆಯುತ್ತಿರುವುದು ನೀವು (ಜಮೀರ್ ಅಹಮ್ಮದ್). ನಿಮ್ಮದೇ ಪಕ್ಷದ ಅಧ್ಯಕ್ಷರು ನಿಮಗೆ ಎಚ್ಚರಿಕೆ ಕೊಡುತ್ತಿದ್ದಾರೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಸಿದ್ದರಾಮಯ್ಯ ಸಿಎಂ ಆಗಬೇಕು ಅಂತೀರಲ್ವಾ, ವೋಲೈಕೆಗೆ ಒಂದು ಮಿತಿ ಇರೋದಿಲ್ವಾ. ನಮ್ಮ ಕುಮಾರಸ್ವಾಮಿ ಕಪ್ಪಾಗಿದ್ದಾರೆ ಅಂತಾ ನಿಂದನೆ ಮಾಡಿದ್ದಾರೆ. ಕನ್ನಡಿಗರ ಕಪ್ಪು ಕಸ್ತೂರಿ ಅಂತಾ ಗೊತ್ತಿದೆಯಾ?. ಹುಷಾರ್ ನಮ್ಮ ನಾಯಕರ ಬಗ್ಗೆ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಜಮೀರ್ ಅಹಮದ್ ಅವರಿಗೆ ಶರವಣ ಎಚ್ಚರಿಕೆ ರವಾನಿಸಿದರು.