ಹೊಸಕೋಟೆ:ಇಲ್ಲಿ ವಾಸವಿರುವ ಒಕ್ಕಲಿಗರ ಸಂಘಕ್ಕೆ ಶಾಸಕ ಶರತ್ ಬಚ್ಚೆಗೌಡ ಕೋಟ್ಯಂತರ ರೂ ಬೆಲೆ ಬಾಳುವ ತಮ್ಮ ಜಮೀನನ್ನು ದಾನವಾಗಿ ನೀಡಿದ್ದಾರೆ. ಹೊಸಕೋಟೆ ತಾಲೂಕಿನ ಅರಳೆಮಾಕನಹಳ್ಳಿಯಲ್ಲಿರುವ ಸುಮಾರು 3 ಎಕರೆ 10 ಗುಂಟೆ ತಮ್ಮ ಜಮೀನನ್ನು ಶಾಸಕ ಬಚ್ಚೆಗೌಡ ಒಕ್ಕಲಿಗರ ಸಮುದಾಯಕ್ಕೆ ದಾನವಾಗಿ ನೀಡಿದ್ದಾರೆ. ಈ ಕುರಿತ ಮಾತನಾಡಿರುವ ಅವರು, ಇಲ್ಲಿ ಒಕ್ಕಲಿಗರ ಸಮುದಾಯಕ್ಕೆ ಸೇರಿದ ಸುಮಾರು 60 ಸಾವಿರ ಜನರಿದ್ದು, ಸಮಾಜಕ್ಕೆ ಅನುಕೂಲವಾಗುವಂತಹ ಕಟ್ಟಡ, ಶಾಲೆ, ಕಲ್ಯಾಣ ಮಂಟಪ ಅಥವಾ ಸಮುದಾಯ ಭವನದಂತಹ ಕಟ್ಟಡ ನಮ್ಮ ಸಮುದಾಯಕ್ಕೂ ಇರಲಿ ಎಂಬುದು ಒಕ್ಕಲಿಗೆ ಸುಮಾರು 16 ವರ್ಷಗಳ ಬೇಡಿಕೆಯಾಗಿದೆ.
ಅದು ಈ ವರೆಗೂ ಈಡೇರದೇ ಇದ್ದ ಕಾರಣ ಕಳೆದ ಬಾರಿ ಕೆಂಪೇಗೌಡರ ಜಯಂತಿಯಂದು ನಾನು ಇಲ್ಲಿಯ ಒಕ್ಕಲಿಗ ಸಮುದಾಯದ ಜನರಿಗೆ ಮಾತನ್ನು ನೀಡಿದ್ದೆ. ನನ್ನ 3 ಎಕರೆ 10 ಗುಂಟೆ ಜಮೀನನ್ನು ಒಕ್ಕಲಿಗ ಸಮುದಾಯಕ್ಕೆ ದಾನವಾಗಿ ನೀಡುವೆ. ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ನಾನು ಬೆಂಬಲ ಸೂಚಿಸುತ್ತೇನೆ ಎಂದು ಹೇಳಿದ್ದೆ. ಅದರಂತೆ ಇಂದು ಆ ಜಮೀನನ್ನು ಒಕ್ಕಲಿಗರ ಸಮುದಾಯಕ್ಕೆ ನೀಡಿದ್ದೇನೆ ಎಂದರು.
ಈ ಹಿಂದೆ ಸನ್ಮಾನ್ಯ ಬಚ್ಚೇಗೌಡರ ಕಾಲದಿಂದಲೂ ಇಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭವನ, ಕನಕ ಭವನ ಸೇರಿದಂತೆ ಬೇರೆ ಬೇರೆ ಸಮುದಾಯದವರಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ಆದರೆ ಈ ಸಮುದಾಯದ ಬಹುದಿನಗಳ ಬೇಡಿಕೆ ಹಾಗೇ ಉಳಿದಿದ್ದ ಕಾರಣ ಈಡೇರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಇರುವಂತಹ ಎಲ್ಲ ಜನರಿಗೂ ಅನುಕೂಲವಾಗುವ ರೀತಿಯಲ್ಲಿ ಕಾರ್ಯಗಳನ್ನು ಮಾಡಲಾಗುವುದು ಎಂದು ಶರತ್ ಬಚ್ಚೇಗೌಡ ತಿಳಿಸಿದರು.