ಬೆಂಗಳೂರು: ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.
ಕಳೆದ ಕೆಲ ತಿಂಗಳುಗಳಿಂದ ಇವರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂಬ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಹಲವು ಸುತ್ತಿನ ಚರ್ಚೆಯ ಬಳಿಕ ಇದೀಗ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ದಿನಾಂಕ ನಿಗದಿಯಾಗಿದೆ. ಫೆ. 26 ಕ್ಕೆ ಕಾಂಗ್ರೆಸ್ ಪಕ್ಷವನ್ನು ಶಾಸಕ ಶರತ್ ಬಚ್ಚೇಗೌಡ ಸೇರ್ಪಡೆ ಆಗಲಿದ್ದಾರೆ.
ಅಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆಶಿ , ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರ ಮುಖಂಡರು ಉಪಸ್ಥಿತರಿರಲಿದ್ದು ಪಕ್ಷದ ಶಾಲು ಹೊದಿಸಿ ಬಾವುಟ ನೀಡಿ ಬರ ಮಾಡಿಕೊಳ್ಳಲಿದ್ದಾರೆ.
ಶರತ್ ಅವರ ತಂದೆ, ಸಂಸದ ಬಿ ಎನ್ ಬಚ್ಚೇಗೌಡ ಚಿಕ್ಕಬಳ್ಳಾಪುರ ಬಿಜೆಪಿ ಸಂಸದರಾಗಿದ್ದಾರೆ. ಇದು ಸಹ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆಯ ವಿಳಂಬಕ್ಕೆ ಕಾರಣವಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜ್ ವಿರುದ್ಧ ಸೋಲು ಕಂಡಿದ್ದರು. ಆದರೆ ಆಪರೇಷನ್ ಕಮಲದ ಹಿನ್ನೆಲೆ ಪಕ್ಷದ ಶಾಸಕ ಸ್ಥಾನಕ್ಕೆ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಎಂಟಿಬಿ ನಾಗರಾಜ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೂ ಕಾರಣರಾಗಿದ್ದರು.
ನಂತರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂಟಿಬಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದರು. ಆದರೆ 2020ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಬಿಜೆಪಿಯಿಂದ ಆಯ್ಕೆಯಾದ ಎಂಟಿಬಿ ನಾಗರಾಜ್ ಸಚಿವರಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದು, ಶಾಸಕರಾಗಿ ಅಭಿವೃದ್ಧಿ ವಿಚಾರದಲ್ಲಿ ತಮಗೆ ಹಿನ್ನಡೆ ಆಗದಿರಲಿ ಎಂಬ ಉದ್ದೇಶದಿಂದ ಶರತ್ ಬಚ್ಚೇಗೌಡ ಅನಿವಾರ್ಯವಾಗಿ ಕಾಂಗ್ರೆಸಿಗೆ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗ್ತಿದೆ.
ಎಂಟಿಬಿ ನಾಗರಾಜ್ಗೆ ಟಿಕೆಟ್ ನೀಡದಂತೆ ತಮ್ಮನ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ಶರತ್ ಬಚ್ಚೇಗೌಡ ಬಿಜೆಪಿ ನಾಯಕರಿಗೆ ಸಾಕಷ್ಟು ಮನವಿ ಮಾಡಿ ವಿಫಲರಾದ ಹಿನ್ನೆಲೆ ಪಕ್ಷೇತರರಾಗಿ ನಿಂತು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆ ಬಿಜೆಪಿಯನ್ನು ಸೇರ್ಪಡೆಯಾಗಲಾರದೆ ಅನಿವಾರ್ಯವಾಗಿ ಮುಂಬರುವ ಚುನಾವಣೆ ವೇಳೆಗೆ ಸರ್ಕಾರದ ಮೇಲೆ ಒಂದಿಷ್ಟು ಒತ್ತಡ ಹೇರಿ ಅಭಿವೃದ್ಧಿಕಾರ್ಯ ಮಾಡಿಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ವಿರೋಧ ಕಂಡುಬಂದ ಹಿನ್ನೆಲೆ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ಸೇರ್ಪಡೆಗೆ ಮೀನಾಮೇಷ ಎಣಿಸಿದ ಹಿನ್ನೆಲೆ ಶರತ್ ಬಚ್ಚೇಗೌಡ ಸೇರ್ಪಡೆ ವಿಳಂಬವಾಗಿತ್ತು. ಇದೀಗ ಕೊನೆಗೂ ಅವರ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿದೆ.
ಕಾಂಗ್ರೆಸ್ ಸೇರ್ಪಡೆ ನಂತರ ಮಾಚ್೯ ಮೊದಲ ವಾರದಲ್ಲಿ ಹೊಸಕೋಟೆಯಲ್ಲಿ ಬೃಹತ್ ಸಮಾವೇಶ ನಡೆಸಲಿರುವ ಶರತ್ ಬಚ್ಚೇಗೌಡ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.