ಬೆಂಗಳೂರು :ಮಹಾರಾಷ್ಟ್ರದ ಎನ್‌ಸಿಪಿ ಪಕ್ಷದ ಅಧ್ಯಕ್ಷ ಶರದ್ ಪವಾರ್ ಉದ್ದಟತನದ ಹೇಳಿಕೆಯನ್ನು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಖಂಡಿಸಿದರು. ಶರದ್ ಪವಾರ್ ಬೆಳಗಾವಿಗೆ ಬಂದರೆ ಸರ್ಕಾರ ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹಿಸಿದರು. ಕರ್ನಾಟಕ-ಮಹಾರಾಷ್ಟ್ರ ನಡುವೆ ಗಡಿ ವಿವಾದ ಹೆಚ್ಚುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗಡಿಯಲ್ಲಿ ಚಿಂತಾಜನಕ ಪರಿಸ್ಥಿತಿ ಇದ್ದು, ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ ಎಂದಿದ್ದರು. ಅಲ್ಲದೆ ಕರ್ನಾಟಕದ ಸಿಎಂ ಪರಿಸ್ಥಿತಿಯನ್ನು ಬೇರೆ ದಿಕ್ಕಿನಡೆಗೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದಾರೆ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ವಾಟಾಳ್ ನಾಗರಾಜ್ ಉದ್ಧಟತನದ ಹೇಳಿಕೆ ಕೊಟ್ಟರೆ ಹೋರಾಟದ ಎಚ್ಚರಿಕೆಯನ್ನು ನೀಡಿದದರು.
ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಕೆಟ್ಟ ರಾಜಕಾರಣ ಬಿಟ್ಟುಬಿಡಿ. ಗಡಿನಾಡಲ್ಲಿ ಗದ್ದಲ, ಅಶಾಂತಿ ಸೃಷ್ಟಿಯಾದರೇ ಶರತ್ ಪವಾರ್ ಅವರೇ ಕಾರಣ ಆಗುತ್ತಾರೆ. ಈಗಾಗಲೇ ಮಹಾರಾಷ್ಟ್ರದ ಸಚಿವರು ಬರುವ ಹಿನ್ನಲೆ ಗಲಾಟೆ ಉಂಟಾಗಿದೆ. ಮತ್ತೆ ಶರದ್ ಪವಾರ್ ಆಗಲೀ, ಮಹಾರಾಷ್ಟ್ರದ ಬೇರೆ ಸಚಿವರಾಗಲೀ ರಾಜ್ಯಕ್ಕೆ ಬಂದರೆ ಬಂಧನ ಮಾಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚೆತ್ತುಕೊಳ್ಳಬೇಕು. ಇಲ್ಲಿ ಪಕ್ಷದ ಪ್ರಶ್ನೆ ಇಲ್ಲ ಎಂದರು. ಅಲ್ಲೂ, ಇಲ್ಲೂ ಎರಡೂ ಕಡೆ ಬಿಜೆಪಿ ಪಕ್ಷ ಇದೆ. ಬೆಳಗಾವಿ ನಮ್ಮಲ್ಲೇ ಉಳಿಯಬೇಕು. ಬೆಳಗಾವಿಯ ಕನ್ನಡಿಗರಿಗೆ ಶಕ್ತಿ ಕೊಡಬೇಕು. ಬೆಳಗಾವಿಯ ಒಂದು ಅಂಗುಲ ನೆಲವನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು. ಅಲ್ಲದೆ ಎಂಇಎಸ್ ಹಾಗೂ ಶಿವ ಸೇನೆಯನ್ನು ವಜಾಗೊಳಿಸಬೇಕು. ನಾಡ ದ್ರೋಹಿ ಪುಂಡರನ್ನು ನಾಡ ವಿರೋಧಿ ಘೋಷಣೆ ಕೂಗಿದವರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ :ಮಹಾರಾಷ್ಟ್ರ ಸಚಿವರು ರಾಜ್ಯ ಪ್ರವೇಶಿಸದರೆ ಬಂಧಿಸಿ: ವಾಟಾಳ್ ನಾಗರಾಜ್ ಆಗ್ರಹ