ಬೆಂಗಳೂರು: ಕೈಮಗ್ಗ, ಜವಳಿ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ್ ಬಿ.ಪಾಟೀಲ್ ಮುನೇನಕೊಪ್ಪ ಇಂದು ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ವ್ಯವಸ್ಥಾಪಕ ನಿರ್ದೇಶಕರುಗಳ ಜತೆ ಆದಾಯ ಹಂಚಿಕೆ ಸಾಧಕ ಬಾಧಕಗಳ ಕುರಿತು ವಿಕಾಸಸೌಧದಲ್ಲಿ ಸಭೆ ನಡೆಸಿದರು.
ಬಳಿಕ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಆದಾಯ ಹಂಚಿಕೆಯಲ್ಲಿ ಸಾಧಕ ಬಾಧಕ ಕುರಿತು ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಇಂದು ಚರ್ಚೆ ನಡೆಸಿದ್ದು, ಈ ಕುರಿತು ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಅಲ್ಲದೇ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಅಭಿಪ್ರಾಯಕ್ಕೆ ಅಭಿಮತ ಸೂಚಿಸುವುದಾಗಿ ಹೇಳಿದ್ದಾರೆ. ಕಾರ್ಖಾನೆ ಮಾಲೀಕರು ಮುಂದಿನ 5 ದಿನಗಳಲ್ಲಿ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ ಎಂದರು.
ಪ್ರಸ್ತುತ, ಉಪ ಉತ್ಪನ್ನಗಳ ಲಾಭಾಂಶಬೇಕು ಎಂಬುದು ರೈತರ ಬೇಡಿಕೆಯಾಗಿದ್ದು, ಈ ಬಗ್ಗೆ ಸಕ್ಕರೆ ಕಾರ್ಖಾನೆ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉಪ ಉತ್ಪನ್ನ ಲಾಭಾಂಶ ವಿಷಯದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಮತ್ತು ರೈತರ ಪರವಾಗಿ ತಾವು ನಿಲ್ಲುವುದಾಗಿ ತಿಳಿಸಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಎಚ್ಎನ್ಟಿಯಲ್ಲಿ ದೊಡ್ಡ ಮೋಸ ಆಗುತ್ತಿದೆ ಎಂಬ ರೈತರ ಆತಂಕವನ್ನು ಕೂಡ ನಿವಾರಿಸಲಾಗಿದೆ. ಎಚ್ಎನ್ಟಿ, ಇಳವರಿ, ತೂಕ ವ್ಯತ್ಯಾಸ ಇತ್ಯಾದಿ ಬಗ್ಗೆ ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಳ್ಳುವುದು ಎಂದು ಭರವಸೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.