ಬೆಂಗಳೂರು :ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲೇಬೇಕೆಂದರೆ ವೀರಶೈವ ಲಿಂಗಾಯತ ಸಮುದಾಯದ ಬೆಂಬಲ ಅತ್ಯಗತ್ಯವಾಗಿದೆ. ರಾಜ್ಯದ 224 ವಿಧಾನಸಭೆ ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಪಕ್ಷದಲ್ಲಿನ ಸಮುದಾಯದ ಮುಖಂಡರು ಕೆಪಿಸಿಸಿಗೆ ಬೇಡಿಕೆ ಸಲ್ಲಿಸಿದ್ದಾರೆ.
ಲಿಂಗಾಯತ-ವೀರಶೈವ ಸಮುದಾಯ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಈ ಸಮುದಾಯದ ಸಹಾಯ ಅವಶ್ಯಕ. ಲಿಂಗಾಯತರ ಬೆಂಬಲದಿಂದಲೇ ಭಾರತೀಯ ಜನತಾ ಪಕ್ಷವು ಚುನಾವಣೆಗಳಲ್ಲಿ ಅತಿ ಹೆಚ್ಚಿನ ಸ್ಥಾನ ಗೆಲ್ಲತೊಡಗಿದೆ. ಬಿಜೆಪಿ ಮತ ಬ್ಯಾಂಕ್ ಕಬಳಿಸಬೇಕೆಂದರೆ ಕಾಂಗ್ರೆಸ್ ಪಕ್ಷದಲ್ಲಿನ ವೀರಶೈವ ಲಿಂಗಾಯತ ಅಭ್ಯರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡುವುದು ಉತ್ತಮ ಎಂದು ಕಾಂಗ್ರೆಸ್ನಲ್ಲಿನ ಹಿರಿಯ ವೀರಶೈವ ಲಿಂಗಾಯತ ಮುಖಂಡರು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ನಲ್ಲಿನ ವೀರಶೈವ ಲಿಂಗಾಯತ ಮುಖಂಡರು 70 ವಿಧಾನಸಭೆ ಕ್ಷೇತ್ರಗಳಲ್ಲಿ ಟಿಕೆಟ್ಗೆ ಬೇಡಿಕೆ ಸಲ್ಲಿಸಿದ ಕ್ಷೇತ್ರವಾರು ವಿವರ ಪಕ್ಷದ ಉನ್ನತ ಮೂಲಗಳಿಂದ 'ಈಟಿವಿ ಭಾರತಕ್ಕೆ' ಲಭ್ಯವಾಗಿದೆ.
ಕಾಂಗ್ರೆಸ್ನಲ್ಲಿನ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡರಾದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ 70ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಬೇಡಿಕೆಯ ಪಟ್ಟಿಯನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಕಳೆದ ಚುನಾವಣೆಯಲ್ಲಿ 40ಕ್ಕೂ ಹೆಚ್ಚು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಇವರಲ್ಲಿ 16 ಜನ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 70 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಹಾಯಕವಾಗುತ್ತದೆ ಎಂದು ಶಾಮನೂರು ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಜೊತೆ ಶಾಮನೂರು ಶಿವಶಂಕರಪ್ಪ ಡಿಕೆಶಿಗೆ ಮುಖಂಡರಿಂದ ಮನವರಿಕೆ: ವೀರಶೈವ ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಷೇತ್ರಗಳು ಮತ್ತು ಬಿಜೆಪಿಯ, ಜೆಡಿಎಸ್ನ ಲಿಂಗಾಯತ ಶಾಸಕರು ಗೆದ್ದಿರುವ ಕ್ಷೇತ್ರಗಳಲ್ಲಿ ಅದೇ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವುದು ಪಕ್ಷದ ಗೆಲುವಿಗೆ ಹೆಚ್ಚು ಸಹಾಯಕವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಕಾಂಗ್ರೆಸ್ನ ಲಿಂಗಾಯತ ಮತ್ತು ವೀರಶೈವ ಸಮುದಾಯದ ಮುಖಂಡರು ಮನವರಿಕೆ ಮಾಡಿಕೊಟ್ಟಿದ್ದಾರೆ. ಪಕ್ಷದ ಹಾಲಿ ಶಾಸಕರ ಕ್ಷೇತ್ರಗಳನ್ನು ಹೊರತುಪಡಿಸಿ ವೀರಶೈವ ಮತ್ತು ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ವೀರಶೈವ ಲಿಂಗಾಯತ ಮುಖಂಡರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕೆಪಿಸಿಸಿಗೆ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ.
ಟಿಕೆಟ್ ಕೇಳಿದ ಕ್ಷೇತ್ರಗಳ ವಿವರ:ಗುಂಡ್ಲುಪೇಟೆ, ಕೃಷ್ಣರಾಜ, ಸೋಮವಾರಪೇಟೆ, ರಾಜಾಜಿನಗರ ಚಿಕ್ಕಪೇಟೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಬೇಲೂರು, ಅರಸೀಕೆರೆ, ಚಿಕ್ಕಮಗಳೂರು, ಕಡೂರು ತರೀಕೆರೆ, ಶಿವಮೊಗ್ಗ, ಶಿಕಾರಿಪುರ ಸಾಗರ, ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಚಿತ್ರದುರ್ಗ, ರಾಣೇಬೆನ್ನೂರು, ಹಿರೇಕೆರೂರು, ಬ್ಯಾಡಗಿ, ಶಿಗ್ಗಾಂವ್, ರೋಣ, ನರಗುಂದ, ಧಾರವಾಡ ಕೇಂದ್ರ, ಧಾರವಾಡ ದಕ್ಷಿಣ, ಧಾರವಾಡ ಗ್ರಾಮೀಣ, ಗೋಕಾಕ್, ಬೆಳಗಾವಿ ಗ್ರಾಮಾಂತರ, ಅರಭಾವಿ, ನಿಪ್ಪಾಣಿ, ಅಥಣಿ, ರಾಮದುರ್ಗ, ಬೈಲಹೊಂಗಲ, ಬಿಜಾಪುರ, ತೇರದಾಳ, ಮುದ್ದೇಬಿಹಾಳ, ಹುನುಗುಂದ, ದೇವರ ಹಿಪ್ಪರಗಿ, ಬಾಗಲಕೋಟೆ, ಬೀಳಗಿ, ಜಮಖಂಡಿ, ಬಬಲೇಶ್ವರ, ಬಸವನಬಾಗೇವಾಡಿ, ಕಲಬುರಗಿ ದಕ್ಷಿಣ, ಸೇಡಂ, ಅಳಂದ, ಯಾದಗಿರಿ, ಗುರುಮಿಟ್ಕಲ್, ಶಹಪುರ, ಸಿಂಧನೂರು, ಬಳ್ಳಾರಿ, ಹರಪನಹಳ್ಳಿ ಯಲಬುರ್ಗ, ಬಾಲ್ಕಿ, ಹುಮ್ನಾಬಾದ್, ಬಸವಕಲ್ಯಾಣ, ಬೀದರ್.. ಇವುಗಳು ಕಾಂಗ್ರೆಸ್ ಪಕ್ಷದ ಮುಖಂಡರು ಲಿಂಗಾಯತ ವೀರಶೈವ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡುವಂತೆ ಕೇಳಿದ ಕ್ಷೇತ್ರಗಳಾಗಿವೆ.
ಕಾಂಗ್ರೆಸ್ ಪಕ್ಷ ಸಹ ಈ ಬಾರಿಯ ವಿಧಾನಸಭೆ ಚುನಾವಣೆ ತಂತ್ರಗಾರಿಕೆ ಬದಲಿಸಿಕೊಂಡು ವೀರಶೈವ ಲಿಂಗಾಯತ ಸಮುದಾಯದ ಹೆಚ್ಚಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಒಲವು ಹೊಂದಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಮತ್ತು ಸಮುದಾಯದ ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪನವರಲ್ಲಿ ಯಾವ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಗೆಲ್ಲಲು ಸಾಧ್ಯವೆನ್ನುವ ಬಗ್ಗೆ ವರದಿ ನೀಡುವಂತೆ ಕೇಳಿಕೊಂಡಿದ್ದರು. ಈ ಸಂಬಂಧ ಶಾಮನೂರು ಶಿವಶಂಕರಪ್ಪನವರು ವೀರಶೈವ ಲಿಂಗಾಯತ ಸಮುದಾಯದ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಸಿ 70 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಆಕಾಂಕ್ಷಿತರ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಎಂದರೆ ಭ್ರಷ್ಟ ಜನತಾ ಪಕ್ಷ: ಸುರ್ಜೇವಾಲಾ ಆಕ್ರೋಶ