ಕರ್ನಾಟಕ

karnataka

ETV Bharat / state

ಶಾಮನೂರು ಶಿವಶಂಕರಪ್ಪ ಹೇಳಿಕೆಯಿಂದ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸ್ಪಷ್ಟ: ಬಿ.ವೈ.ವಿಜಯೇಂದ್ರ - ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ

ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಶಾಮನೂರು ಶಿವಶಂಕರಪ್ಪನವರ ಹೇಳಿಕೆ, ಕಾವೇರಿ ವಿವಾದ ಹಾಗು ಪ್ರತಿಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದರು.

ಬೆಂಗಳೂರಿನಲ್ಲಿ ನಡೆದ ಸ್ವಚ್ಛ ಭಾರತ ಅಭಿಯಾನದಲ್ಲಿ  ಬಿ.ವೈ.ವಿಜಯೇಂದ್ರ ಪಾಲ್ಗೊಂಡರು.
ಬೆಂಗಳೂರಿನಲ್ಲಿ ನಡೆದ ಸ್ವಚ್ಛ ಭಾರತ ಅಭಿಯಾನದಲ್ಲಿ ಬಿ.ವೈ.ವಿಜಯೇಂದ್ರ ಪಾಲ್ಗೊಂಡರು.

By ETV Bharat Karnataka Team

Published : Oct 1, 2023, 6:30 PM IST

ಬೆಂಗಳೂರು: ಸರ್ಕಾರ ಮುನ್ನಡೆಸುತ್ತಿರುವವರು ಎಲ್ಲ ಸಮುದಾಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಎನ್ನುತ್ತಾರೆ. ಆದರೆ, ಅವರ ಪಕ್ಷದ ಹಿರಿಯರೇ ಅನ್ಯಾಯದ ವಿರುದ್ಧ ದನಿ ಎತ್ತಿದ್ದಾರೆ ಎಂದ ಮೇಲೆ ಕಾಂಗ್ರೆಸ್​ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂದೇ ಅರ್ಥ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸ್ವಚ್ಛ ಭಾರತ ಅಭಿಯಾನದಡಿ ಇಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಂಬೆಪೇಟೆ ವೃತ್ತದಲ್ಲಿ ಬಿಜೆಪಿ ಮುಖಂಡ ಸಪ್ತಗಿರಿ ಗೌಡ ನೇತೃತ್ವದಲ್ಲಿ ಮನೆ, ಮನೆಗೆ ತೆರಳಿ ಕಸದ ಡಬ್ಬ ವಿತರಣೆ ಮತ್ತು ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ ಅಭಿಯಾನದಲ್ಲಿ ಬಿಜೆಪಿ ಶಾಸಕರಾದ ಬಿ.ವೈ.ವಿಜಯೇಂದ್ರ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಮಂತ್ರಿಗಳು ಗಾಂಧಿ ಜಯಂತಿ ನಿಮಿತ್ತ ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಈ ಕರೆಗೆ ಓಗೊಟ್ಟು ದೇಶಾದ್ಯಂತ ಪಕ್ಷಾತೀತವಾಗಿ ಎಲ್ಲರೂ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಇದೇ ವೇಳೆ, ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗಿದೆ ಎಂಬ ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಸರ್ಕಾರದಲ್ಲಿ ಯಾವ ರೀತಿ ವ್ಯವಸ್ಥೆಗಳು ಹಾಳಾಗುತ್ತಿವೆ. ಒಂದು ಜಾತಿಗೆ ಸೀಮಿತವಾಗಿ ಅಧಿಕಾರಿಗಳ ಆಯ್ಕೆ ಮತ್ತು ಮತ್ತೊಂದು ಜಾತಿಯವರಿಗೆ ಅನ್ಯಾಯ ಆಗುತ್ತಿರುವ ಕುರಿತು ಹಿರಿಯ ಕಾಂಗ್ರೆಸ್ ಮುಖಂಡರೇ ಮಾತನಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಅಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಒಂದು ಜಾತಿಗೆ ಆದ್ಯತೆ ಮತ್ತು ಇನ್ಯಾರಿಗೋ ಅನ್ಯಾಯ ಮಾಡುತ್ತಾರೆ ಎಂದಾದರೆ ಇದು ಸಂವಿಧಾನ ವಿರೋಧಿ ಎಂದು ಕಿಡಿಕಾರಿದರು.

ಸರ್ಕಾರದವರು ಮಾತನಾಡುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ಆದರೆ, ನಿಮ್ಮ ಸರ್ಕಾರದ್ದೇ ಮಾಜಿ ಸಚಿವರು, ಹಿರಿಯ ಮುಖಂಡರು ಈ ರೀತಿ ಹೇಳಿದ್ದಾರೆ ಎಂದರೆ ಎಲ್ಲವೂ ಸರಿ ಇಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಲಿಂಗಾಯತರ ಕಡೆಗಣನೆ ಆಗಿದೆ ಎಂದಿದ್ದಾರೆ. ಶಾಮನೂರು ಅವರು ಪ್ರಾಮಾಣಿಕರಾಗಿದ್ದು, ಪಕ್ಷದ ಪರವಾಗಿ ನಿಲ್ಲದೆ ನ್ಯಾಯದ ಪರ ಧ್ವನಿ ಎತ್ತಿದ್ದಾರೆ ಎಂದು ಹೇಳಿದರು.

ಕಾವೇರಿ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಕಾವೇರಿ ಕೊಳ್ಳದ ವಿಚಾರದಲ್ಲಿ ಅನ್ಯಾಯ ಆಕ್ಷೇಪಾರ್ಹ. ಆದರೆ, ಈಗ ಅಭಿವೃದ್ಧಿಗೆ ಹಣವೇ ಬಿಡುಗಡೆ ಆಗುತ್ತಿಲ್ಲ. ಶಾಸಕರಿಗೂ ಅನುದಾನ ಸಿಗುತ್ತಿಲ್ಲ. ಇದು ಸರ್ಕಾರ ಯಾವ ನಿಟ್ಟಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಮುಂದಿನ ಆರು ತಿಂಗಳು ಮಾತ್ರ ಸರ್ಕಾರ ಇರೋದು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಅವರಿಂದಲೇ ಮಾಹಿತಿ ಪಡೆಯಬೇಕು. ಅವರು ಯಾವ ಸಂದರ್ಭದಲ್ಲಿ ಈ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.

ಪ್ರತಿಪಕ್ಷ ನಾಯಕನ ನೇಮಕ ಮತ್ತು ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಬಿಜೆಪಿಯ ಕೇಂದ್ರ ನಾಯಕರು ತಡ ಮಾಡಿದ್ದಾರೆಂದರೆ ಅದಕ್ಕೆ ಸಕಾರಣಗಳು ಇದ್ದೇ ಇರುತ್ತವೆ. ಅತಿ ಶೀಘ್ರದಲ್ಲೇ ಅಧ್ಯಕ್ಷರು ಮತ್ತು ವಿಪಕ್ಷ ನಾಯಕರನ್ನು ನೇಮಕ ಮಾಡುತ್ತಾರೆಂಬ ವಿಶ್ವಾಸ ಇದೆ ಎಂದು ವಿಜಯೇಂದ್ರ ತಿಳಿಸಿದರು.

ಇದನ್ನೂ ಓದಿ:ಶಾಮನೂರು ಶಿವಶಂಕರಪ್ಪನವರು ಒಂದು ಜಾತಿಯ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿರುವುದು ಸರಿಯಲ್ಲ: ಹೆಚ್‌.ವಿಶ್ವನಾಥ್

ABOUT THE AUTHOR

...view details