ಬೆಂಗಳೂರು:''ರಾಜ್ಯ ಸರ್ಕಾರದ ಗ್ಯಾರೆಂಟೆ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ಫಲಶೃತಿಯಿಂದ ಸಾರಿಗೆ ನೌಕರರಿಗೆ ಅರ್ಧ ಸಂಬಳ ಮಾತ್ರ ಗ್ಯಾರಂಟಿ ಲಭಿಸಿದೆ'' ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ''ಶಕ್ತಿ ಯೋಜನೆ ಜಾರಿಯಾದ ಮೊದಲ ತಿಂಗಳಿನಿಂದಲೇ ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ಆರ್ಥಿಕ ಬರೆಯನ್ನು ಎಳೆದಿದೆ. ಗ್ಯಾರೆಂಟಿ ಯೋಜನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಹಣ ಒದಗಿಸಿದ್ದೇವೆ ಎಂಬ ಹೇಳಿಕೆ ಮೊದಲನೇ ತಿಂಗಳು ಹುಸಿಯಾಗಿದೆ'' ಎಂದು ಅವರು ತಿಳಿಸಿದ್ದಾರೆ.
''ಮುಂಬರುವಂತ ದಿನಗಳಲ್ಲಿ ಸಾರಿಗೆ ನಿಗಮಗಳು ಬಸ್ಗಳನ್ನು ಡೀಸೆಲ್ ಇಲ್ಲದೆ ನಿಲ್ಲಿಸುವಂತದ್ದು, ಸಾರಿಗೆ ನೌಕರರು ಸಂಬಳ ಇಲ್ಲದೆ ದುಡಿಯುವಂತದ್ದು, ಕೆಟ್ಟ ಬಸ್ಗಳು ರಸ್ತೆಯಲ್ಲಿ ನಿಲ್ಲುವ ದಿನಗಳು ದೂರವಿಲ್ಲ'' ಎಂದು ಅಭಿಪ್ರಾಯ ಪಟ್ಟಿದ್ದಾರೆ. ''ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದು, ರಾಜ್ಯದ ಅಭಿವೃದ್ಧಿಯ ಕಥೆ ಅಯೋಮಯವಾಗಲಿದೆ'' ಎಂದ ಅವರು, ''ರಾಜ್ಯ ಸರ್ಕಾರ ಎಸ್ಸಿಪಿ, ಟಿಎಸ್ಪಿ ಯೋಜನೆಗೆ 34 ಸಾವಿರ ಕೋಟಿ ಬದಲು ಕೇವಲ 23 ಸಾವಿರ ಕೋಟಿ ರೂ.ಗೆ ಅನುಮೋದನೆ ನೀಡಿದಂತಾಗಿದ್ದು, ಇದು ಎಸ್ಸಿಪಿ ಕಾಯ್ದೆಯ ಉಲ್ಲಂಘನೆಯ ಜೊತೆಗೆ ಆ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ದ್ರೋಹವಾಗಿದೆ'' ಎಂದು ಕಿಡಿಕಾರಿದ್ದಾರೆ.