ಬೆಂಗಳೂರು: ತೃತೀಯ ಲಿಂಗಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆ ಪ್ರತಿನಿಧಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ವಿವರಿಸಿ, ಪರಿಹಾರಕ್ಕೆ ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷರ ಬಳಿ ಸಮಸ್ಯೆ ಹೇಳಿಕೊಂಡ ಲೈಂಗಿಕ ಅಲ್ಪಸಂಖ್ಯಾತರು - ಲಾಕ್ಡೌನ್ ಲೈಂಗಿಕ ಅಲ್ಪಸಂಖ್ಯಾತರು
ಲಾಕ್ಡೌನ್ ಹಾಗೂ ನಂತರದ ದಿನಗಳಲ್ಲಿ ತೀವ್ರ ಸಮಸ್ಯೆಗೊಳಗಾದ ಲೈಂಗಿಕ ಅಲ್ಪಸಂಖ್ಯಾತರು, ತಮ್ಮ ಸಮಸ್ಯೆಗಳನ್ನು ಬರೆಹರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡ ಸಂಘಟನೆ ಪ್ರತಿನಿಧಿಗಳು, ಲಾಕ್ಡೌನ್ ಅವಧಿ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ನಮ್ಮ ಬದುಕು ದುಸ್ತರವಾಗಿದೆ. ಸರ್ಕಾರದಿಂದಲೂ ನಿರೀಕ್ಷಿತ ಸಹಕಾರ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು.
ಈ ವೇಳೆ ಪ್ರತಿಕ್ರಿಯಿಸಿದ ಡಿ.ಕೆ.ಶಿ, ನಾವು ಸಂತ್ರಸ್ತರಿಗೆ ಹಾಗೂ ಸಮಸ್ಯೆಗೆ ತುತ್ತಾದವರಿಗೆ ಕನಿಷ್ಠ ಮಾಸಿಕ 10 ಸಾವಿರ ರೂಪಾಯಿ ನೀಡುವಂತೆ ಸರ್ಕಾರವನ್ನು ಕೋರಿದ್ದೆವು. ಆದರೆ 5,000 ರೂಪಾಯಿ ನೀಡುವುದಾಗಿ ಘೋಷಿಸಿದ ಸರ್ಕಾರ ಅದನ್ನು ಎಲ್ಲರಿಗೂ ತಲುಪಿಸಿಲ್ಲ. ಇದನ್ನೇ ನಾವು ಪ್ರಶ್ನಿಸಿದ್ದು, ಆದರೆ ಸರ್ಕಾರದಿಂದಲೂ ನಮಗೆ ಸೂಕ್ತ ಉತ್ತರ ಸಿಕ್ಕಿಲ್ಲ. ಈಗಲೂ ಸಹ ನಿಮ್ಮ ಬೇಡಿಕೆಯನ್ನು ಸರ್ಕಾರದ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.