ಬೆಂಗಳೂರು: ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಹಣಕಾಸಿನ ವಿಚಾರಕ್ಕಾಗಿ ಯುವತಿಯೊಂದಿಗೆ ಅಮಾನುಷವಾಗಿ ವರ್ತಿಸಿದ್ದೇವೆ ಎಂದು ಬಂಧಿತ ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಬಂಧಿಸಿ ನಗರ ಪೂರ್ವ ವಿಭಾಗದ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.
"ವಿಡಿಯೋದಲ್ಲಿರುವ ಯುವತಿ ಕೂಡ ಬಾಂಗ್ಲಾದವಳು, ಆಕೆ ನಮಗೆ ಪರಿಚಿತೆ. ಆಕೆಗೂ ನಮಗೂ ವ್ಯವಹಾರಿಕ ವಿಚಾರದಲ್ಲಿ ಗಲಾಟೆಯಾಗಿತ್ತು. ಆಕೆ ನಮಗೆ 7 ಲಕ್ಷ ಹಣ ನೀಡದೆ ಸತಾಯಿಸುತ್ತಿದ್ದಳು. ಇದೇ ಕಾರಣಕ್ಕೆ ನಾವು 6 ಜನರೇ ಈ ಕೃತ್ಯ ಎಸಗಿದ್ದೇವೆ. ರಾಮಮೂರ್ತಿನಗರ ಚನಸಂದ್ರ ಬಳಿಯ ಮನೆಯೊಂದರಲ್ಲಿ ಅತ್ಯಾಚಾರ ನಡೆಸಿದ್ದೇವೆ." ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ನಾವೆಲ್ಲಾ ಬಾಂಗ್ಲಾದೇಶದವರಾಗಿದ್ದು, ಅಕ್ರಮವಾಗಿ ಭಾರತಕ್ಕೆ ಬಂದಿದ್ದೇವೆ. ನಗರಕ್ಕೆ ಬಂದು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದೆವು. ಯಾವುದೇ ದಾಖಲೆಗಳಿಲ್ಲದೆ ಕಾನೂನು ಬಾಹಿರವಾಗಿ ಬಾಂಗ್ಲಾದಿಂದ ಭಾರತಕ್ಕೆ ಅತಿಕ್ರಮವಾಗಿ ನುಸುಳಿಕೊಂಡು ಬಂದಿದ್ದೆವು ಎಂದು ತಪ್ಪೊಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳ ವಿರುದ್ಧ ವಿದೇಶಿ ಕಾಯ್ದೆ 1948ರಡಿ ಭಾರತಕ್ಕೆ ಅತಿಕ್ರಮಣ ಪ್ರವೇಶ, ಐಟಿ ಆ್ಯಕ್ಟ್, ಐಪಿಸಿ 376 (ಡಿ) ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿವೆ.