ಬೆಂಗಳೂರು: ಶಾಲೆಗೆ ಹೋಗುವ ಬಾಲಕಿಯನ್ನು ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಇಲ್ಲಿಯ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಸಂಬಂಧ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ. ಎಂಟು ವರ್ಷದ ಬಾಲಕಿ ಮೇಲೆ ಎರಗಿ ಲೈಂಗಿಕ ದೌರ್ಜನ್ಯ ಎಸಗಿರುವ ಹಿನ್ನೆಲೆ ಗ್ಯಾರೇಜ್ನಲ್ಲಿ ಕೆಲಸ ಮಾಡಿಕೊಂಡಿದ್ದ ಫಿರೋಜ್ ಖಾನ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಬಾಲಕಿಯ ಕುಟುಂಬ ಜೀವನ ನಡೆಸಲು 2 ವರ್ಷದ ಹಿಂದೆ ನಗರದ ಈಜೀಪುರಕ್ಕೆ ಬಂದು ವಾಸವಾಗಿತ್ತು. ಸಂತ್ರಸ್ತ ಬಾಲಕಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಗುರುವಾರ ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗುತ್ತಿದ್ದರು. ಈ ವೇಳೆ ಎದುರಿಗೆ ಬಂದ ಆರೋಪಿ ಫಿರೋಜ್ ಖಾನ್ ನಿನ್ನ ಬಳಿ ಮಾತನಾಡಬೇಕು ಎಂದು ಪುಸಲಾಯಿಸಿ ಬಾಲಕಿಯನ್ನು ತಾನೂ ಕೆಲಸ ಮಾಡುತ್ತಿದ್ದ ಗ್ಯಾರೇಜ್ ಒಳಗೆ ಕರೆದುಕೊಂಡು ಹೋಗಿದ್ದಾನೆ.
ನಂತರ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಇದರಿಂದ ಗಾಬರಿಯಾದ ಬಾಲಕಿ ಆರೋಪಿಯಿಂದ ತಪ್ಪಿಸಿಕೊಂಡು ಅಳುತ್ತಾ ಹೊರಬಂದು ತಾಯಿಯ ಬಳಿ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಮಗಳ ಮೇಲಾದ ದೌರ್ಜನ್ಯದ ಬಗ್ಗೆ ಸಂತ್ರಸ್ಥ ಬಾಲಕಿಯ ತಾಯಿ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ಫಿರೋಜ್ ಖಾನ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಕೋರ್ಟ್ಗೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ:ಶಾಲೆಯಿಂದ ಬರುತ್ತಿದ್ದ ಬಾಲಕಿ ಮೇಲೆ ದೌರ್ಜನ್ಯ: ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಮಂಗಳೂರು ಕೋರ್ಟ್