ಬೆಂಗಳೂರು: ಹಣದ ಹಿಂದೆ ಬಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ವೊಬ್ಬ ಮಹಿಳೆಯರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆಗಳನ್ನು ಸೃಷ್ಟಿಸಿದ್ದ. ಈ ಮೂಲಕ ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯರನ್ನು ಲೈಂಗಿಕ ಜಾಲಕ್ಕೆ ತಳ್ಳುತ್ತಿದ್ದ. ಇಂಥ ದುರುಳನನ್ನು ಇದೀಗ ನಗರ ಆಗ್ನೇಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ: ಆಂಧ್ರಪ್ರದೇಶ ಮೂಲದ ದಿಲ್ಲಿ ಪ್ರಸಾದ್ ಬಂಧಿತನಾಗಿದ್ದು ಕೋರಮಂಗಲದಲ್ಲಿ ವಾಸವಾಗಿದ್ದ. ಈತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಸಂಪಾದಿಸಲು ಅಡ್ಡದಾರಿ ತುಳಿದು ಇನ್ಸ್ಟಾಗ್ರಾಮ್‌ನಲ್ಲಿ ಮೋನಿಕಾ, ಮ್ಯಾನೇಜರ್ ಎಂಬುದೂ ಸೇರಿದಂತೆ ಐದಕ್ಕಿಂತ ಹೆಚ್ಚು ನಕಲಿ ಖಾತೆಗಳನ್ನು ಸೃಷ್ಟಿಸಿ ಯುವತಿ ಹಾಗೂ ಮಹಿಳೆಯರೊಂದಿಗೆ ಚಾಟ್ ಮಾಡುತ್ತಿದ್ದ. ತಾನು ಎಂಎನ್ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನನಗೆ ಗೊತ್ತಿರುವ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಈ ಮಾತು ನಂಬಿ ಯುವತಿಯರು ಆರೋಪಿ ಹೇಳಿದ ಜಾಗಕ್ಕೆ ಬರುತ್ತಿದ್ದರು.
ಪೂರ್ವಸಂಚಿನಂತೆ ಮಡಿವಾಳದ ಓಯೊ ಹೊಟೇಲ್ ರೂಮ್ ಬುಕ್ ಮಾಡಿ ಅಲ್ಲಿ ಸಂದರ್ಶನ ನಡೆಯಲಿದೆ ಎಂದು ಒಳಗೆ ಕರೆಯಿಸಿಕೊಳ್ಳುತ್ತಿದ್ದ. ಆದರೆ ಒಳಗೆ ನೋಡಿದಾಗ ಚಿತ್ರಣವೇ ಬದಲು.! ಸಂದರ್ಶನ ನಡೆಸುವ ಬದಲು ಲೈಂಗಿಕವಾಗಿ ಸಹಕರಿಸಿದರೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಆರೋಪಿ ಪುಸಲಾಯಿಸುತ್ತಿದ್ದ. ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿ ಅದನ್ನು ರಹಸ್ಯವಾಗಿ ಸೆರೆಹಿಡಿದುಕೊಳ್ಳುತ್ತಿದ್ದ. ಅದೇ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಇದೇ ರೀತಿ ಸುಮಾರು 10ಕ್ಕಿಂತ ಹೆಚ್ಚು ಯುವತಿಯರನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.