ಬೆಂಗಳೂರು:ರಾಜ್ಯ ಸರ್ಕಾರದ ರಾತ್ರಿ ಕರ್ತವ್ಯವನ್ನ ಕಾಂಗ್ರೆಸ್ ನಾಯಕರು ತೀವ್ರವಾಗಿ ಲೇವಡಿ ಮಾಡಿದ್ದಾರೆ. ಇಂದಿನಿಂದ ಜಾರಿಗೆ ಬರುವ ರಾತ್ರಿ ಕರ್ಫ್ಯೂ ಜನವರಿ 2 ರವರೆಗೆ ಮುಂದುವರಿಯಲಿದೆ. ರಾತ್ರಿ 11 ಗಂಟೆಯಿಂದ ಮಾರನೇ ದಿನ ಬೆಳಿಗ್ಗೆ 6 ಗಂಟೆ ವರೆಗೆ ಕರ್ಫ್ಯೂ ಜಾರಿಯಲ್ಲಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದು ಸರ್ಕಾರದ ನಿಲುವನ್ನು ತೀವ್ರವಾಗಿ ಆಕ್ಷೇಪಿಸಿದ್ದಾರೆ.
ಇದನ್ನೂ ಓದಿ : ಇಂದಿನ ಬದಲು ನಾಳೆಯಿಂದ ನೈಟ್ ಕರ್ಫ್ಯೂ ಜಾರಿ: ಸಮಯದಲ್ಲೂ ಬದಲಾವಣೆ ಮಾಡಿದ ಸರ್ಕಾರ..!
ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಟ್ವೀಟ್ ಮಾಡಿದ್ದು, ರಾಜ್ಯ ಬಿಜೆಪಿ ಸರ್ಕಾರದ ತರ್ಕರಹಿತವಾದ ಕರ್ಫ್ಯೂ ಆದೇಶವನ್ನು ಕಂಡ ನಂತರ ರಾತ್ರಿ ಮಾತ್ರ ಎಚ್ಚರವಾಗಿರೋಕೆ ಅದೇನು ಕೊರೊನಾನಾ? ಇಲ್ಲ ಗೂಬೆನಾ ಎಂಬ ಅನುಮಾನ ನನ್ನ ಕಾಡತೊಡಗಿದ್ದು, ಈ ಮಾತು ಹಾಸ್ಯವಾಗಿ ಕಂಡರೂ ನನ್ನಲ್ಲಿ ದಿಗಿಲು ಹುಟ್ಟಿಸಿದೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರ ಕರ್ಫ್ಯೂ ವಿಚಾರದಲ್ಲಿ ಗೊಂದಲಕಾರಿ ನಿಲುವು ಪ್ರದರ್ಶಿಸುತ್ತಿದೆ. ಪದೇ ಪದೇ ನಿರ್ಧಾರ ಬದಲಿಸುವುದು ಅಸಮರ್ಥ ಆಡಳಿತದ ಸಂಕೇತ. ಒಂದು ಕಡೆ 10 ದಿನಗಳ ರಾತ್ರಿ ಕರ್ಪ್ಯೂ ಹೇರಿರುವ ಸರ್ಕಾರ ಮತ್ತೊಂದೆಡೆ ಜ.1ರಿಂದ ಶಾಲಾ-ಕಾಲೇಜ್ ಪ್ರಾರಂಭಿಸುವ ನಿರ್ಧಾರ ಮಾಡಿದೆ. ರೂಪಾಂತರಿ ಕೊರೊನಾ ನಿಶಾಚಾರಿಯೇ ರಾತ್ರಿ ವೇಳೆ ಮಾತ್ರ ಸಂಚರಿಸಲು?
ರಾಜ್ಯ ಸರ್ಕಾರ ಹಳೆಯ ತಪ್ಪುಗಳನ್ನೇ ಪುನಾರವರ್ತನೆ ಮಾಡುತ್ತಿದೆ. ರಾತ್ರಿ ವೇಳೆ ಕರ್ಪ್ಯೂ ಹೇರುವ ಸರ್ಕಾರಕ್ಕೆ ರೂಪಾಂತರಗೊಂಡಿರುವ ಕೊರೊನಾ ವೈರಸ್ ಜ.1 ರಿಂದ ಹರಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದೆಯೆ? ವೈರಸ್‌ಗೆ ಸರ್ಕಾರವೇ ಭಯಪಟ್ಟಿರುವಾಗ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಧೈರ್ಯ ಮಾಡುತ್ತಾರೆಯೆ? ಸರ್ಕಾರ ಉತ್ತರಿಸಲಿ ಎಂದು ಹೇಳಿದ್ದಾರೆ.