ಕರ್ನಾಟಕ

karnataka

ETV Bharat / state

ಬರಪೀಡಿತ ಪಟ್ಟಿಗೆ ಮತ್ತೆ 7 ತಾಲೂಕುಗಳು ಸೇರ್ಪಡೆ: ರಾಜ್ಯ ಸರ್ಕಾರ ಆದೇಶ

Drought affected taluks of Karnataka: ಬರಪೀಡಿತ ತಾಲೂಕುಗಳ ಪಟ್ಟಿಗೆ ಹೊಸದಾಗಿ ಏಳು ತಾಲೂಕುಗಳನ್ನು ಸೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

By ETV Bharat Karnataka Team

Published : Nov 5, 2023, 6:42 AM IST

drought
ಬರ

ಬೆಂಗಳೂರು:ರಾಜ್ಯದಲ್ಲಿ ಬರದ ತೀವ್ರತೆ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೆ ಏಳು ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಎಂದು ಶನಿವಾರ ಸರ್ಕಾರ ಘೋಷಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದಂತಾಗಿದೆ.

ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ ಸಮೀಕ್ಷೆಯ (Ground Truthing) ವರದಿಯನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಘೋಷಿಸಲಾಗಿದೆ.

ಈ ಕೈಪಿಡಿಯಲ್ಲಿ ಬರ ಪರಿಸ್ಥಿತಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳನ್ನು ತಿಳಿಸಲಾಗಿದೆ. ಹಂತ-1ರಲ್ಲಿ ಮಳೆ ಕೊರತೆ (ಶೇ.50ಕ್ಕಿಂತ ಹೆಚ್ಚು) ಅಥವಾ ಸತತ ಮೂರು ವಾರಗಳ ಅಥವಾ ಅದಕ್ಕಿಂತ ಹೆಚ್ಚು ಶುಷ್ಕ ವಾತಾವರಣ (Dry Spell) ಕಂಡು ಬಂದಿರಬೇಕು. ಹಂತ-2 ರಲ್ಲಿ ತತ್ಪರಿಣಾಮ ಮಾನದಂಡಗಳಾದ ಕೃಷಿ ಬಿತ್ತನೆ ಪ್ರದೇಶ, ಉಪಗ್ರಹ ಆಧಾರಿತ ಬೆಳೆ ಆರೋಗ್ಯ ಸೂಚ್ಯಂಕ, ತೇವಾಂಶ ಕೊರತೆ (MAI) ಹಾಗೂ ನದಿಗಳಲ್ಲಿನ ಹರಿವು, ಜಲಾಶಯಗಳ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟ ಸೂಚ್ಯಂಕಗಳಲ್ಲಿನ ತೀವ್ರತೆಯನ್ನು ಆಧರಿಸಿ ಹೆಚ್ಚುವರಿಯಾಗಿ ಏಳು ತಾಲೂಕುಗಳು ಬರ ಪರಿಸ್ಥಿತಿ ಉದ್ಭವಿಸಿರುವ ತಾಲೂಕುಗಳೆಂದು ಗುರುತಿಸಲಾಗಿದೆ. ಅದರಂತೆ, ಜಿಲ್ಲಾಧಿಕಾರಿಗಳಿಂದ ಬೆಳೆ ಸಮೀಕ್ಷೆ ಬಗ್ಗೆ ವರದಿಯನ್ನು ಪಡೆದು ಪರಿಶೀಲಿಸಿ ಹೊಸದಾಗಿ ಏಳು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಆದೇಶಿಸಲಾಗಿದೆ. ಆ ಮೂಲಕ ರಾಜ್ಯದಲ್ಲಿನ ಒಟ್ಟು 236 ತಾಲೂಕುಗಳ ಪೈಕಿ 223 ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ.

ಇದನ್ನೂ ಓದಿ:ಬರ ಪರಿಹಾರ: 324 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ

ಹೊಸದಾಗಿ ಸೇರ್ಪಡೆಯಾದ 7 ಬರಪೀಡಿತ ತಾಲೂಕುಗಳು: ಔರಾದ್, ಬೀದರ್, ಚಿಟಗುಪ್ಪಾ, ಹುಮ್ನಾಬಾದ್, ಕಮಲನಗರ, ಸಿಂಧನೂರು‌ ಹಾಗೂ ತಿಕೋಟ.

ಇದನ್ನೂ ಓದಿ :ಹೆಚ್ಚುವರಿಯಾಗಿ 22 ತಾಲೂಕುಗಳು 'ಬರ ಪೀಡಿತ' : ರಾಜ್ಯ ಸರ್ಕಾರ ಘೋಷಣೆ

ಸಿಎಂ ಸಿದ್ದರಾಮಯ್ಯ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ಮುಂದಿನ ಎರಡು ವಾರಗಳಲ್ಲಿ ತಮ್ಮ ಜಿಲ್ಲೆಯ ಪ್ರತಿ ತಾಲೂಕುಗಳಿಗೆ ಭೇಟಿ ನೀಡಿ, ಬರ ನಿರ್ವಹಣೆ ಸಂಬಂಧ ವರದಿ ನೀಡಲು ಸೂಚಿಸಿದ್ದಾರೆ. ಈ ಕುರಿತು ಪತ್ರ ಬರೆದಿರುವ ಮುಖ್ಯಮಂತ್ರಿಗಳು, ಬರದ ಹಿನ್ನೆಲೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಕೃಷಿ-ಕೈಗಾರಿಕೆಗಳಿಗೆ ನೀರು, ಬೆಳೆಹಾನಿ, ಜನರ ಉದ್ಯೋಗದ ಸ್ಥಿತಿ, ಬರ ಪರಿಹಾರ ವಿತರಣೆ ಮುಂತಾದ ಬರ ನಿರ್ವಹಣೆ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕುರಿತು ಸಚಿವ ಸಂಪುಟ ಸಭೆಗಳಲ್ಲಿ ಚರ್ಚಿಸಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಹಲವು ಬಾರಿ ನಿರ್ದೇಶನಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:2 ವಾರದಲ್ಲಿ ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಿ: ಸಚಿವರಿಗೆ ಸಿಎಂ ಸೂಚನೆ

ABOUT THE AUTHOR

...view details