ಬೆಂಗಳೂರು: ಲಾಕ್ಡೌನ್ ವೇಳೆ ಹಲವು ಸಾಫ್ಟ್ವೇರ್ ಕಂಪನಿಗಳು ಪ್ರಧಾನಿ ಮೋದಿ ಮನವಿ ಮೀರಿ ತಮ್ಮ ಸಿಬ್ಬಂದಿಗೆ ಗುಲಾಬಿ ಚೀಟಿ (ಪಿಂಕ್ ಸ್ಲಿಪ್) ನೀಡುತ್ತಿವೆ. ಇದರ ನಂತರದ ದಿನಗಳು ಟೆಕ್ಕಿಗಳ ಪಾಲಿಗೆ ಇನ್ನಷ್ಟು ಘೋರವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ಐಟಿ ಕ್ಷೇತ್ರಕ್ಕೆ ಕೊರೊನಾ ಕಂಟಕ ಭಾರತದ ಒಟ್ಟು ತಂತ್ರಾಂಶ ನಿರ್ಯಾತ ಸುಮಾರು 46 ಸಾವಿರ ಕೋಟಿ ರೂಪಾಯಿಗಳಷ್ಟಿದೆ. ಇದು ದೇಶದ ಒಟ್ಟು ಉತ್ಪಾದನೆಯ ಪ್ರತಿಶತ 2 ಆಗುತ್ತದೆ. ಇದರಲ್ಲಿ ಕರ್ನಾಟಕದ ಪಾಲು 14 ಸಾವಿರ ಕೋಟಿ ಇದೆ. ಅಂದರೆ, ರಾಷ್ಟ್ರದ ಅಂದಾಜು ಪ್ರತಿಶತ 30. ಇದರಲ್ಲಿ ಬಹುತೇಕ ತಂತ್ರಾಂಶ ತಯಾರಿ ಬೆಂಗಳೂರಿನಲ್ಲೇ ಆಗುತ್ತದೆ. ಬೆಂಗಳೂರನ್ನು ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದು ಕರೆಯಲು ಆಧಾರ ಇಲ್ಲಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲೇ ಬೆಂಗಳೂರಿಗೆ ದೊಡ್ಡ ಹೆಸರಿದೆ. ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದು ಕೂಡ ಹೇಳಲಾಗುತ್ತದೆ. ವಿಪ್ರೋ, ಇನ್ಫೋಸಿಸ್ ಜತೆಗೆ ವಿದೇಶಿ ಮೂಲದ ಟೆಕ್ಸಾಸ್ ಇನ್ಸ್ಟ್ರೂಮೆಂಟ್ಸ್, ಐ.ಬಿ.ಎಂ, ಇಂಟೆಲ್, ಡಿಜಿಟಲ್ ಹೀಗೆ ಹಲವು ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿವೆ.
90ರ ದಶಕದಲ್ಲಿ ಆರಂಭವಾದ ಕಂಪನಿಗಳ ಕ್ರಾಂತಿ ಈಗಲೂ ಭಾರಿ ವೈಭವದಲ್ಲಿದೆ. ಆದರೆ, ಈಗ ಕೊರೊನಾ ತಡೆಗೆ ಲಾಕ್ಡೌನ್ ಘೋಷಿಸಿದ್ದರ ಪ್ರಭಾವ ಈ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನಲಾತ್ತಿದೆ. ಏಪ್ರಿಲ್ 21ರವರೆಗೆ ಲಾಕ್ಡೌನ್ ವಿಧಿಸಿದ್ದರಿಂದಲೇ ನಷ್ಟಕ್ಕೊಳಗಾಗಿ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿವೆ. ಇದೀಗ ಮೇ 3ಕ್ಕೆ ವಿಸ್ತರಣೆ ಆಗಿದೆ. ಇದು ಇನ್ನಷ್ಟು ಆತಂಕ ಸೃಷ್ಟಿಸುವುದು ಶತಸಿದ್ಧ.
ಅಲ್ಲದೇ ಇಲ್ಲಿನ ಕಂಪನಿಗಳಿಗೆ ಕೆಲಸ ಕೊಡುತ್ತಿದ್ದ ರಾಷ್ಟ್ರ ಅಮೆರಿಕ, ಇಂಗ್ಲೆಂಡ್, ಇಟಲಿ, ಯೋರೋಪ್ ರಾಷ್ಟ್ರಗಳೇ ಕೊರೊನಾ ಹೊಡೆತಕ್ಕೆ ಸಂಕಷ್ಟದಲ್ಲಿವೆ. ಅಲ್ಲಿನ ಉದ್ಯೋಗಿಗಳನ್ನೇ ಕೆಲಸದಿಂದ ಕಿತ್ತು ಹಾಕುತ್ತಿವೆ. ಹೀಗಿರುವಾಗ ಅವುಗಳ ಶಾಖೆ ಹಾಗೂ ಅವರು ನೀಡುವ ಯೋಜನೆಗಳನ್ನು ನಂಬಿ ನಡೆಯುತ್ತಿದ್ದ ಮಹಾನಗರದ ಹಲವು ಕಂಪನಿಗಳು ಕಣ್ಮುಚ್ಚಲಿವೆ.
ಇಲ್ಲವೇ ತಮ್ಮ ಕೆಲ ಯೋಜನೆಗೆ ಸೀಮಿತಗೊಳಿಸಿಕೊಂಡು ಹೆಚ್ಚುವರಿ ಸಿಬ್ಬಂದಿಗೆ ಗುಲಾಬಿ ಚೀಟಿ ನೀಡಲಿವೆ ಎನ್ನಲಾಗುತ್ತಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೊರೊನಾ ಕೋಲಾಹಲ: ಕೊರೊನಾ ಸೋಂಕು ಕೋಲಾಹಲವನ್ನೇ ಸೃಷ್ಟಿಸಿದೆ. ಮನೆಯಿಂದಲೇ ಕೆಲಸ ಮಾಡಿ ಎಂದು ಕಳಿಸಿದ್ದ ಕಂಪನಿಗಳು ಇದೀಗ ಅನೇಕ ಉದ್ಯೋಗಿಗಳಿಗೆ ವಾಪಸ್ ಬರುವುದು ಬೇಡ ಎನ್ನುತ್ತಿವೆ. ಏಕಾಏಕಿ ಒಂದೊಂದು ಕಂಪನಿಗಳು ಒಂದೊಂದು ಯೋಜನೆಗಳ ಮೇಲೆ ಕೆಲಸ ಮಾಡುತ್ತಿದ್ದು, 40-50 ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ಕಿತ್ತು ಹಾಕುತ್ತಿವೆ.
ವಿಪರ್ಯಾಸ ಎಂದರೆ ಕೊರೊನಾ ಹಿನ್ನೆಲೆ ರಾಷ್ಟ್ರದಲ್ಲಿ ಲಾಕ್ಡೌನ್ ಜಾರಿಗೆ ಮುನ್ನ ಉದ್ಯೋಗ ಕೊರತೆ ಪ್ರಮಾಣ ಶೇ. 8.8 ಇತ್ತು. ಆದರೆ, ಈಗ ಇದು ಶೇ. 28ಕ್ಕೆ ಏರಿಕೆಯಾಗಿದೆ ಎಂದು ಕೆಲ ವರದಿಗಳು ಹೇಳುತ್ತಿವೆ. ಅನೇಕ ಕಂಪನಿಗಳು ಮಾರ್ಚ್ ತಿಂಗಳ ಸಂಬಳವನ್ನು ಕೆಲವರಿಗೆ ಅರ್ಧ ನೀಡಿವೆ, ಮತ್ತೆ ಕೆಲವರಿಗೆ ಸಂಬಳ ಬೇಕೆಂದರೆ ರಾಜೀನಾಮೆ ನೀಡಿ ಎನ್ನುತ್ತಿವೆ. ಮೂರು ತಿಂಗಳ ನೋಟಿಸ್ ಅನ್ನುವ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ.
ಉದ್ಯಮಕ್ಕೆ ಕರಿ ನೆರಳು: ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದ ಐಟಿ ಉದ್ಯಮದ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ. ಸುಮಾರು 191 ಶತಕೋಟಿ ರೂಪಾಯಿಯಷ್ಟು ಮೊತ್ತದ ಭಾರಿ ನಷ್ಟ ಉಂಟಾಗಿದೆಯಂತೆ. ಸದ್ಯ ಐಟಿ ಕಂಪನಿಗಳಲ್ಲಿ 4.6 ದಶಲಕ್ಷ ಉದ್ಯೋಗಿಗಳಿದ್ದಾರೆ. 2020ರ ಹಣಕಾಸು ವರ್ಷದಲ್ಲಿ 147 ಬಿಲಿಯನ್ ಯುಎಸ್ ಡಾಲರ್ ರಫ್ತು ಆದಾಯ ಗಳಿಸುವ ಗುರಿ ಹೊಂದಲಾಗಿತ್ತು. ಆದರೆ, ಇದು ಈಗಿನ ಪರಿಸ್ಥಿತಿಯಲ್ಲಿ ಅಸಾಧ್ಯ ಎನ್ನಲಾಗುತ್ತಿದೆ.
ಸಣ್ಣ ಮತ್ತು ಮಧ್ಯಮ ದರ್ಜೆಯ ಕಂಪನಿಗಳು ತಮ್ಮ ಸಿಬ್ಬಂದಿಗೆ ಸಾಮೂಹಿಕವಾಗಿ ಗುಲಾಬಿ ಚೀಟಿ ನೀಡುತ್ತಿವೆ. ದೊಡ್ಡ ಕಂಪನಿಗಳು ಕೆಲ ದಿನ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿವೆ ಎಂಬ ಮಾತು ಕೇಳಿ ಬರುತ್ತಿದೆ. ದೊಡ್ಡ ಕಂಪನಿಗಳು ಸದ್ಯ ಮಾಸಿಕ 1 ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ಮೊತ್ತದ ವೇತನ ಪಡೆಯುತ್ತಿರುವವರ ಅರ್ಧ ವೇತನ ಕಡಿತಕ್ಕೆ ನಿರ್ಧರಿಸಿವೆ. ಮುಂದಿನ ದಿನಗಳಲ್ಲಿ ಅದರ ನಿರ್ಧಾರಗಳು ಬದಲಾಗಲಿವೆ ಎನ್ನಲಾಗುತ್ತಿದೆ.
ಒಟ್ಟಾರೆ ಐಟಿ ಉದ್ಯಮಕ್ಕೆ ಕೊರೊನಾ ಸೋಂಕು ಬರ ಸಿಡಿಲಿನಂತೆ ಬಂದೆರಗಿದೆ. ಇದರಿಂದ ಟೆಕ್ಕಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ಮುಂದಿನ ದಿನಗಳಲ್ಲಿ ಸಿಗುವ ಕೆಲಸ ಕೂಡ ಕಡಿಮೆ ಆಗಲಿರುವ ಹಿನ್ನೆಲೆ ಅನೇಕರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ದೊಡ್ಡ ಮೊತ್ತದ ಸಂಬಳ, ಐಶಾರಾಮಿ ಬದುಕಿಗೆ ಒಗ್ಗಿಕೊಂಡವರು, ಸಾಲ ಮಾಡಿ ಮನೆ, ಕಾರು ಖರೀದಿಸಿದವರಿಗೆ ಈಗಿನ ಪರಿಸ್ಥಿತಿ ಕಂಗಾಲಾಗಿಸಿದೆ. ಮುಂದೇನು ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಸ್ಥಿತಿ ಎದುರಾಗಿದೆ.