ಬೆಂಗಳೂರು:ಆಸ್ತಿ ತೆರಿಗೆ ವಂಚಕರಲ್ಲಿ ನಡುಕ ಹುಟ್ಟಿಸಿದ್ದ ಬಿಬಿಎಂಪಿಯ ಮಹತ್ವಾಕಾಂಕ್ಷೆಯ ಟೋಟಲ್ ಸ್ಟೇಷನ್ ಸರ್ವೇ ಯೋಜನೆ ಸದ್ದಿಲ್ಲದೆ ನೆಲಕಚ್ಚಿದೆ. ಹೊಸ ಯೋಜನೆ ಪ್ರಯತ್ನಕ್ಕೆ ಅಡಿಪಾಯದಲ್ಲೇ ಎಳ್ಳುನೀರು ಬಿಡಲಾಗುತ್ತಿದೆ.
2016ರಲ್ಲಿ ಅಂದಿನ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ಅವರು ಜಾರಿಗೆ ತಂದಿದ್ದ ಟೋಟಲ್ ಸ್ಟೇಷನ್ ಸರ್ವೇ ಕಾರ್ಯಕ್ರಮ ಉದ್ದೇಶಿತ ಗುರಿ ಮುಟ್ಟುವ ಮೊದಲೇ ವೈಫಲ್ಯದ ಅಂಚಿಗೆ ಬಂದು ನಿಂತಿದೆ.
ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ ಅಡಿ ಆಸ್ತಿ ಮಾಲೀಕರು ತಮ್ಮ ಕಟ್ಟಡಗಳ ವಿವರಗಳನ್ನು ತಪ್ಪಾಗಿ ಸಲ್ಲಿಸಿದ್ದರೆ, ಟೋಟಲ್ ಸ್ಟೇಷನ್ ಸರ್ವೇ ಮೂಲಕ ಪತ್ತೆ ಹಚ್ಚಲಾಗುತ್ತಿತ್ತು. ತೆರಿಗೆ ಸಂಗ್ರಹದ ಜೊತೆ ದಂಡ ವಸೂಲಿ ಮಾಡಿ ಬಿಬಿಎಂಪಿ ಬೊಕ್ಕಸ ಭರ್ತಿ ಮಾಡುವ ಈ ಯೋಜನೆಗೆ 2016ರಲ್ಲಿ ಚಾಲನೆ ನೀಡಲಾಗಿತ್ತು.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಆರಂಭದಲ್ಲಿ 77ಕ್ಕೂ ಅಧಿಕ ಟೆಕ್ ಪಾರ್ಕ್ಗಳು, 51 ಮಾಲ್ಗಳು, 4,834 ಕೈಗಾರಿಕೆಗಳು ಕಡಿಮೆ ಆಸ್ತಿ ಘೋಷಣೆ ಮಾಡಿರುವ ಅನುಮಾನ ಕಂಡು ಬಂದ ಹಿನ್ನಲೆ ಟೋಟಲ್ ಸ್ಟೇಷನ್ ಸರ್ವೇ ಮಾಡಲು ಆರಂಭಿಸಲಾಗಿತ್ತು. ಆದರೆ, ತೆರಿಗೆ ವಂಚಕರನ್ನು ಪತ್ತೆ ಮಾಡುವಲ್ಲಿ ಬಿಬಿಎಂಪಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇನ್ನೂ ವರದಿ ಸಿದ್ಧವಾಗಿಲ್ಲ ಎಂದು ಕಾಲ ದೂಡಿದ ಅಧಿಕಾರಿಗಳು, ಈಗ ಆಸ್ತಿಗಳ ಘೋಷಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಹೇಳಿಕೆ ನೀಡಿ ಯೋಜನೆಗೆ ಎಳ್ಳು ನೀರು ಬಿಡುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತಗೆ ಪ್ರತಿಕ್ರಿಯೆ ನೀಡಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ, ಟೋಟಲ್ ಸ್ಟೇಷನ್ ಸರ್ವೇಯಿಂದ ಪಾಲಿಕೆಗೆ ಲಾಭವಾಗುವ ಬದಲು ನಷ್ಟವಾಗುತ್ತಿದೆ. ಸರ್ವೇ ನಡೆಸಿದ ವಲಯಗಳಲ್ಲಿ ಹೆಚ್ಚಿನ ವ್ಯತ್ಯಾಸ ಏನೂ ಕಂಡು ಬಂದಿಲ್ಲ. ಬದಲಾಗಿ ಈ ಯೋಜನೆಗೆ ಪಾಲಿಕೆ ಸುಖಾಸುಮ್ಮನೆ ವೆಚ್ಚ ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಹಳೇ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೇ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.
ಯೋಜನೆಯ ಉಸ್ತುವಾರಿಯಾಗಿದ್ದ ಕಂದಾಯ ಜಂಟಿ ಆಯುಕ್ತ ವೆಂಕಟಾಚಲಪತಿ ಅವರು, ಟೋಟಲ್ ಸ್ಟೇಷನ್ ಸರ್ವೇ ಈಗ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮಹದೇವಪುರದಲ್ಲಿ ಮಾತ್ರ 40 ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೇ ನಡೆಯುತ್ತಿದೆ ಎಂದು ಕರೆಯಲ್ಲು ತಿಳಿಸಿದರು. ಸಮಿತಿ ಅಧ್ಯಕ್ಷರ ಹಾಗೂ ಜಂಟಿ ಆಯುಕ್ತರ ಹೇಳಿಕೆಗಳು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ, ಗೊಂದಲಗಳಿಗೆ ಕಾರಣವಾಗಿದೆ.
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಟೆಂಡರ್ ಕರೆದು ಆರಂಭಿಸಿದ್ದ ಟೋಟಲ್ ಸ್ಟೇಷನ್ ಸರ್ವೇ ಒಂದೂ ವರದಿಯನ್ನು ನೀಡದೆ ನೆಲಕಚ್ಚುತ್ತಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿ, ತೆರಿಗೆ ವಂಚಕರನ್ನೂ ರಕ್ಷಿಸಲು ಪಾಲಿಕೆ ಮುಂದಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.